ಬೆಂಗಳೂರು: ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕ ವೃಂದದಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ವೃಂದದ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಏಪ್ರಿಲ್ 21ರಿಂದ 24ರ ವರೆಗೆ ನಿಗದಿಯಾಗಿದ್ದ ಅರ್ಹತಾ ಪರೀಕ್ಷೆಯನ್ನು ಶಿಕ್ಷಣ ಇಲಾಖೆ ಮುಂದೂಡಿದೆ.
ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜನಗಣತಿ ಕಾರ್ಯದಲ್ಲಿ ಬಹುತೇಕ ಶಿಕ್ಷಕರು ತೊಡಗಿರುವ ಹಿನ್ನೆಲೆಯಲ್ಲಿ ಅರ್ಹತಾ ಪರೀಕ್ಷೆ ಮುಂದೂಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಕೇಂದ್ರೀಯ ದಾಖಲಾತಿ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.


