ಬೆಂಗಳೂರು: ಬಿಸಿಲ ಧಗೆ, ತಾಪಮಾನ ಹೆಚ್ಚಳದ ನಡುವೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಹಕ್ಕಿಜ್ವರ ಎಂಟ್ರಿ ಕೊಟ್ಟಿದೆ. ಬೆಂಗಳೂರಿನ ಹೆಸರಘಟ್ಟದಲ್ಲಿರುವ ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೌಲ್ಟ್ರಿ ಫಾರಂನಲ್ಲಿ H5N1 ವೈರಸ್ ಪತ್ತೆಯಾಗಿದೆ.
ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ನಡೆಸಿದ ತಪಾಸಣೆಯ ವೇಳೆ ಕೋಳಿಗಳಲ್ಲಿ ಹಕ್ಕಿ ಜ್ವರದ ಸೋಂಕು ಇರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ತಕ್ಷಣವೇ ಫಾರಂ ಅನ್ನು ಮುಚ್ಚಲಾಗಿದ್ದು, ಈ ಪ್ರದೇಶದಿಂದ ರಾಜ್ಯದ ವಿವಿಧ ಭಾಗಗಳಿಗೆ ಕೋಳಿ ಸರಬರಾಜು ಸ್ಥಗಿತಗೊಳಿಸಲಾಗಿದೆ.
ಏವಿಯನ್ ಇನ್ಫ್ಲುಯೆನ್ಸ ಎಂದೂ ಕರೆಯಲ್ಪಡುವ ಬರ್ಡ್ ಫ್ಲೂ ವೈರಸ್ ಸೋಂಕು ಆಗಿದ್ದು ಅದು ಪಕ್ಷಿಗಳಿಗೆ ಮಾತ್ರವಲ್ಲ, ಮನುಷ್ಯರು ಮತ್ತು ಇತರ ಪ್ರಾಣಿಗಳಲ್ಲಿಯೂ ಕಂಡು ಬರುತ್ತದೆ. ಇದೇ ವೈರಸ್ ನಗರದಲ್ಲಿ ಕಂಡುಬರುತ್ತಿದ್ದು, ಪೌಲ್ಟ್ರಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಕೋಳಿ ಸಾಕಾಣಿಕೆದಾರರನ್ನು ವೈದ್ಯಾಧಿಕಾರಿಗಳು ಕ್ವಾರಂಟೈನ್ ಮಾಡಿದ್ದಾರೆ. ಸುತ್ತಮುತ್ತಲಿನ ಕೋಳಿ ಶೆಡ್ಗಳಲ್ಲೂ ತಪಾಸಣೆ ನಡೆಸುವಂತೆ ಪಶುವೈದ್ಯಾಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಹಕ್ಕಿ ಜ್ವರದ ಆತಂಕ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಎಚ್ಚರಿಕಾ ನೋಟಿಸ್ ನೀಡಲಾಗಿದೆ. ಕೋಳಿ ಸಾಕಾಣಿಕೆ ಕೇಂದ್ರಗಳು ಹಾಗೂ ಕೋಳಿ ಅಂಗಡಿಗಳಲ್ಲಿ ವಿಶೇಷ ಪರಿಶೀಲನೆ ನಡೆಯುತ್ತಿದೆ. ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ಈ ವೈರಸ್ ಹರಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಇದು ಮನುಷ್ಯರಿಗೂ ಹರಡಬಹುದಾದ್ದರಿಂದ ಸಾರ್ವಜನಿಕರು ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಬೇಕು.
ಸೋಂಕಿತ ಹಕ್ಕಿಗಳನ್ನು ಸ್ಪರ್ಶಿಸಬಾರದು.
ಆಹಾರವನ್ನು ಚೆನ್ನಾಗಿ ಬೇಯಿಸಿ ಸೇವಿಸಬೇಕು.
ಹಸಿ ಮೊಟ್ಟೆ ಮತ್ತು ಸರಿಯಾಗಿ ಬೇಯಿಸದ ಮಾಂಸವನ್ನು ತಿನ್ನಬಾರದು.
ಕೈಗಳನ್ನು ನಿಯಮಿತವಾಗಿ ತೊಳೆಯುವುದು ಹಾಗೂ ಸ್ಯಾನಿಟೈಸರ್ ಬಳಕೆ ಮಾಡುವುದು ಸುರಕ್ಷಿತ ಕ್ರಮಗಳಾಗಿವೆ.

