ಬೆಂಗಳೂರು: ರಾಜ್ಯದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಳವಗುತ್ತಿದ್ದು, ರಣ ಬಿಸಿಲ ಹೊಡೆತಕೆ ಜನರು ಹೈರಾಣಾಗುತ್ತಿದ್ದಾರೆ. ಎಲ್ ನಿನೋ ಪ್ರಭಾವದಿಂದಾಗಿ ಉಷ್ಣತೆಯ ಮಟ್ಟ ಏರಿಕೆಯಾಗುತ್ತಿದ್ದು, ಹವಾಮಾನದ ಮೇಲೆ ಭಾರಿ ಪರಿಣಾಅಮ ಬೀರುವ ಸಾಧ್ಯತೆ ಇದೆ. ಈ ಬಾರಿ ಮಳೆ ಕೊರತೆ ಉಂಟಾಗುವ ಬಗ್ಗೆಯೂ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಪ್ಯಾಸಿಫಿಕ್ ಮಹಾಸಾಗರದ ಮೇಲ್ಮೈ ನೀರಿನ ತಾಪಮಾನ ಏರಿಕೆಯಿಂದ ಉಂಟಾಗುವ ಈ ಘಟನೆಯು ಜಾಗತಿಕ ಹವಾಮಾನ ಮಾದರಿಯಲ್ಲಿ ಬದಲಾವಣೆ ತರಬಹುದು. ಭಾರತದ ಮಟ್ಟದಲ್ಲಿ, ‘ಎಲ್ ನಿನೋ’ ಪರಿಣಾಮದಿಂದ ದಕ್ಷಿಣ-ಪಶ್ಚಿಮ ಮಳೆಗಾಲದ (Monsoon) ಆರಂಭದಲ್ಲಿ ಸ್ವಲ್ಪ ವಿಳಂಬವಾಗುವ ಅಥವಾ ಮಳೆಯ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗುವ ಸಾಧ್ಯತೆ ಇರುವುದಾಗಿ ಹವಾಮಾನ ತಜ್ಞರು ತಿಳಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಕೆಲವು ಪ್ರದೇಶಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ.
ಆರೋಗ್ಯದ ಮೇಲೂ ಪರಿಣಾಮ:
ಹೆಚ್ಚಿದ ಉಷ್ಣತೆಯಿಂದ ದೇಹದ ನೀರಿನ ಕೊರತೆ ಮತ್ತು ಹೀಟ್ ಸ್ಟ್ರೋಕ್ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ವೈದ್ಯರು ಸೂಚಿಸಿದ್ದಾರೆ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಹೊರಗಡೆ ಕೆಲಸ ಮಾಡುವವರು ಹೆಚ್ಚು ಎಚ್ಚರಿಕೆ ವಹಿಸಬೇಕು.
ದಿನದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸಬೇಕು
ಬೆಳಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ನೇರ ಬಿಸಿಲಿನಲ್ಲಿ ಹೆಚ್ಚು ಕಾಲ ಇರುವುದನ್ನು ತಪ್ಪಿಸಬೇಕು
ಹಗುರವಾದ ಮತ್ತು ಹತ್ತಿಯ ಬಟ್ಟೆಗಳನ್ನು ಧರಿಸುವುದು ಸೂಕ್ತ
ಹೊರಗೆ ಹೋಗುವಾಗ ತಲೆ ಮುಚ್ಚಿಕೊಳ್ಳುವುದು, ನೆರಳಿನ ಸ್ಥಳದಲ್ಲಿ ವಿಶ್ರಾಂತಿ ಪಡೆಯುವುದು ಉತ್ತಮ
ಹೀಟ್ ಸ್ಟ್ರೋಕ್ ಲಕ್ಷಣಗಳು:
ತೀವ್ರ ತಲೆನೋವು, ತಲೆ ಸುತ್ತುವುದು, ವಾಂತಿ, ಮೂರ್ಚೆ ಅಥವಾ ಬೆವರು ಕಡಿಮೆಯಾಗುವುದು ಇತ್ಯಾದಿ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯಕೀಯ ನೆರವು ಪಡೆಯುವುದು ಅಗತ್ಯ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
ಬಿಸಿಲಿನ ತೀವ್ರತೆ ಹಿನ್ನೆಲೆಯಲ್ಲಿ ಮನೆ ಹಾಗೂ ಬೀದಿ ಪ್ರಾಣಿಗಳಿಗೆ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡುವುದು ಮಾನವೀಯಕರ್ತವ್ಯವಾಗಿದೆ. ಸಾರ್ವಜನಿಕರು ಬಿಸಿಲಿನ ತೀವ್ರತೆಯನ್ನು ಲಘುವಾಗಿ ತೆಗೆದುಕೊಳ್ಳದೆ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು ಎಂದು ಹವಾಮಾನ ತಜ್ಞರು ಸಲಹೆ ನೀಡಿದ್ದಾರೆ.

