ಬೆಂಗಳೂರು : ರಾಜರಾಜೇಶ್ವರಿ ನಗರದ (RR Nagar) ಬೆಮಲ್ ಲೇಔಟ್‌ನಲ್ಲಿ ಪುತ್ರನೋರ್ವ ತನ್ನ ಹೆತ್ತ ತಾಯಿಯನ್ನೇ ಮಹಡಿ ಮೇಲಿಂದ ತಳ್ಳಿ ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. 72 ವರ್ಷದ ಸಾವಿತ್ರಮ್ಮ ಮೃತ ದುರ್ದೈವಿ. ಆರೋಪಿ ಮಗ ವೆಂಕಟೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಹೌದು. ಕಳೆದ 5 ವರ್ಷಗಳಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ 72 ವರ್ಷದ ವೃದ್ಧ ತಾಯಿಯನ್ನು, ಆಕೆಯ ಆರೈಕೆ ಮಾಡಲಾಗದೆ ಬೇಸತ್ತ ಸ್ವಂತ ಮಗನೇ ಮನೆಯ 3ನೇ ಮಹಡಿಯಿಂದ ತಳ್ಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.ಹೆತ್ತ ತಾಯಿಯ ಆರೈಕೆ ಮಾಡಲಾಗದೆ ಹತಾಶನಾದ ಮಗ 3ನೇ ಮಹಡಿಯಿಂದ ತಳ್ಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಘಟನೆಯ ವಿವರ: ಸಾವಿತ್ರಮ್ಮ ಅವರು ಕಳೆದ ಐದಾರು ವರ್ಷಗಳಿಂದ ಪಾರ್ಶ್ವವಾಯು (Paralysis) ಪೀಡಿತರಾಗಿದ್ದು, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಅರೆ ಪ್ರಜ್ಞಾವಸ್ಥೆಯಲ್ಲಿದ್ದುದರಿಂದ ಅವರ ಆರೈಕೆ ಮಾಡುವುದು ಮಗ ವೆಂಕಟೇಶ್‌ಗೆ ಕಷ್ಟಕರವಾಗಿತ್ತು ಎನ್ನಲಾಗಿದೆ. ತಾಯಿಯ ದೀರ್ಘಕಾಲದ ಅನಾರೋಗ್ಯದಿಂದ ಬೇಸತ್ತಿದ್ದ ವೆಂಕಟೇಶ್, ಮನೆಯ ಮೂರನೇ ಮಹಡಿಯಿಂದ ಅವರನ್ನು ಕೆಳಕ್ಕೆ ತಳ್ಳಿದ್ದಾನೆ. ತೀವ್ರವಾಗಿ ಗಾಯಗೊಂಡ ಸಾವಿತ್ರಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಪೊಲೀಸ್ ತನಿಖೆ: ವಿಷಯ ತಿಳಿಯುತ್ತಿದ್ದಂತೆಯೇ ಆರ್.ಆರ್ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಗ ವೆಂಕಟೇಶ್‌ನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರಿಸಿದ್ದಾರೆ. ತಾಯಿಯ ಅನಾರೋಗ್ಯದ ಕಾರಣದಿಂದಲೇ ಈ ಕೃತ್ಯ ಎಸಗಿದ್ದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಇಂತಹ ಕೌಟುಂಬಿಕ ಕಲಹ ಮತ್ತು ಹಿಂಸಾಚಾರದ ಘಟನೆಗಳು ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

