ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿಂದು ( ಏಪ್ರಿಲ್ 14 ) ನಡೆದ ಐಪಿಎಲ್ 2026ರ ಲೀಗ್ ಹಂತದ 22ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 32 ರನ್‌ಗಳ ಜಯ ಸಾಧಿಸಿ ಹ್ಯಾಟ್ರಿಕ್ ಸೋಲಿನ ಬಳಿಕ ಸತತ ಎರಡನೇ ಗೆಲುವನ್ನು ಕಂಡಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಸಂಜು ಸ್ಯಾಮ್ಸನ್, ಆಯುಷ್ ಮ್ಹಾತ್ರೆ ಹಾಗೂ ಡಿವಾಲ್ಡ್ ಬ್ರೆವಿಸ್ ಉತ್ತಮ ಆಟದ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಕಲೆಹಾಕಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 193 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಕೊಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 160 ರನ್ ಕಲೆಹಾಕಿದೆ.
ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ರುತುರಾಜ್ ಗಾಯಕ್ವಾಡ್ ಕೇವಲ 7 ರನ್‌ಗೆ ಔಟ್ ಆಗುವ ಮೂಲಕ ಮತ್ತೊಮ್ಮೆ ವಿಫಲರಾದರು. ಮತ್ತೋರ್ವ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ 32 ಎಸೆತಗಳಲ್ಲಿ 48 ರನ್ ಗಳಿಸಿದರು. ರುತುರಾಜ್ ವಿಕೆಟ್ ಬಿದ್ದ ಬೆನ್ನಲೇ ಕಣಕ್ಕಿಳಿದ ಆಯುಷ್ ಮ್ಹಾತ್ರೆ 17 ಎಸೆತಗಳಲ್ಲಿ 38 ರನ್ ಚಚ್ಚಿದರು. ಇನ್ನುಳಿದಂತೆ ಡಿವಾಲ್ಡ್ ಬ್ರೆವಿಸ್ 29 ಎಸೆತಗಳಲ್ಲಿ 41 ರನ್ ಬಾರಿಸಿದರೆ, ಸರ್ಫರಾಜ್ ಖಾನ್ 23, ಶಿವಮ್ ದುಬೆ ಅಜೇಯ 13 (12) ಹಾಗೂ ಜೇಮಿ ಓವರ್ಟನ್ ಅಜೇಯ 7 (6) ರನ್ ಗಳಿಸಿದರು.
ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಾರ್ತಿಕ್ ತ್ಯಾಗಿ ಎರಡು ವಿಕೆಟ್, ಸುನಿಲ್ ನರೈನ್, ಅನುಕುಲ್ ರಾಯ್ ಹಾಗೂ ವೈಭವ್ ಅರೋರಾ ತಲಾ ಒಂದೊಂದು ವಿಕೆಟ್ ಪಡೆದರು.
ಕೊಲ್ಕತ್ತಾ ನೈಟ್ ರೈಡರ್ಸ್ ಇನ್ನಿಂಗ್ಸ್: ತಂಡ ಕೇವಲ 29 ರನ್‌ಗೆ ತನ್ನ ಇಬ್ಬರೂ ಆರಂಭಿಕರನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಫಿನ್ ಅಲೆನ್ ಕೇವಲ ಒಂದು ರನ್ ಗಳಿಸಿದರೆ, ಸುನಿಲ್ ನರೇನ್ 17 ಎಸೆತಗಳಲ್ಲಿ 24 ರನ್ ಗಳಿಸಿದರು. ಇನ್ನುಳಿದಂತೆ ಅಜಿಂಕ್ಯ ರಹಾನೆ 28, ಅಂಗ್‌ಕ್ರಿಶ್ ರಘುವಂಶಿ 27, ರಿಂಕು ಸಿಂಗ್ 6, ಕ್ಯಾಮೆರಾನ್ ಗ್ರೀನ್ ಡಕ್‌ಔಟ್, ರಮಣ್‌ದೀಪ್ ಸಿಂಗ್ 35, ರಮಣ್‌ದೀಪ್ ಸಿಂಗ್ 35, ರೊವ್‌ಮನ್ ಪೊವೆಲ್ ಅಜೇಯ 31 ರನ್ ಹಾಗೂ ಅನುಕುಲ್ ರಾಯ್ ಅಜೇಯ 1 ರನ್ ಕಲೆಹಾಕಿದರು.
ಕೊಲ್ಕತ್ತಾ ನೈಟ್ ರೈಡರ್ಸ್ ಬ್ಯಾಟ್ಸ್‌ಮನ್‌ಗಳನ್ನು ಕಾಡಿದ ಚೆನ್ನೈ ಸೂಪರ್ ಕಿಂಗ್ಸ್ ಪರ ನೂರ್ ಅಹ್ಮದ್ ಮೂರು ವಿಕೆಟ್, ಅನ್ಶುಲ್ ಕಾಂಬೋಜ್ ಎರಡು ವಿಕೆಟ್, ಖಲೀಲ್ ಅಹ್ಮದ್ ಹಾಗೂ ಅಕೆಲ್ ಹೊಸೈನ್ ತಲಾ ಒಂದೊಂದು ವಿಕೆಟ್ ಪಡೆದರು.

