HomeIPL 2026IPL 2026: ಬೆಂಗಳೂರು ನೀಡಿದ ಟಾರ್ಗೆಟ್ ಬೆನ್ನತ್ತಲಾಗದೇ ಸೋತ ಮುಂಬೈ

IPL 2026: ಬೆಂಗಳೂರು ನೀಡಿದ ಟಾರ್ಗೆಟ್ ಬೆನ್ನತ್ತಲಾಗದೇ ಸೋತ ಮುಂಬೈ

ಮುಂಬೈ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಹಾಗೂ ನಾಯಕ ರಜತ್ ಪಾಟಿದರ್ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಅತಿಥೇಯ ಮುಂಬೈ ಇಂಡಿಯನ್ಸ್ ತಂಡವನ್ನು 18 ರನ್‌ಗಳಿಂದ ಮಣಿಸಿತು.

ಇಲ್ಲಿನ ವಾಖೆಂಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ 2026ರ 20ನೇ ಲೀಗ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ವಿರಾಟ್ ಕೊಹ್ಲಿ, ರಜತ್ ಪಾಟಿದರ್ ಹಾಗೂ ಫಿಲ್ ಸಾಲ್ಟ್ ಅವರ ಭರ್ಜರಿ ಬ್ಯಾಟಿಂಗ್ ಬಲದಿಂದ ನಿಗದಿತ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 240 ರನ್ ಕಲೆಹಾಕಿತು. ಈ ಬೃಹತ್ ಮೊತ್ತ ಬೆನ್ನತ್ತುವಲ್ಲಿ ವಿಫಲವಾದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 222 ರನ್ ಗಳಿಸಲಷ್ಟೆ ಶಕ್ತವಾಯಿತು.

ಆರ್‌ಸಿಬಿ ಪರ ಮೊದಲು ಇನ್ನಿಂಗ್ಸ್ ಆರಂಭಿಸಿದ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಮುಂಬೈ ಬೌಲರ್‌ಗಳನ್ನು ಬೆಂಡೆತ್ತಿದರು. ವಾಖೆಂಡೆಯ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್ ಬಾರಿಸುವ ಮೂಲಕ ಶತಕದ ಜೊತೆಯಾಟ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 120 ರನ್‌ ಪೇರಿಸಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫಿಲ್ ಸಾಲ್ಟ್ 36 ಎಸೆತಗಳಲ್ಲಿ 6 ಬೌಂಡರಿ, 6 ಭರ್ಜರಿ ಸಿಕ್ಸರ್‌ಗಳ ಸಹಾಯದಿಂದ 78 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 50 ರನ್ ಕಲೆಹಾಕಿ ನಿರ್ಗಮಿಸಿದರು. ಬಳಿಕ ಬಂದ ನಾಯಕ ರಜತ್ ಪಾಟಿದರ್ ಆರಂಭದಿಂದಲೇ ವೇಗ ಪಡೆದುಕೊಂಡು 20 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ಸೇರಿ 53 ರನ್ ಚಚ್ಚಿದರು.

ಉಳಿದಂತೆ ಜಿತೇಶ್ ಶರ್ಮಾ 10, ಟಿಮ್ ಡೇವಿಡ್ ಅಜೇಯ 34 ಹಾಗೂ ರೋಮಾರಿಯೂ ಶೆಫರ್ಡ್ ಅಜೇಯ 2 ರನ್ ಗಳಿಸಿದರು.

ಮುಂಬೈ ಪರ ಟ್ರೆಂಟ್ ಬೌಲ್ಟ್, ಹಾರ್ದಿಕ್ ಪಾಂಡ್ಯ, ಮಿಚೆಲ್ ಸ್ಯಾಂಟ್ನರ್ ಹಾಗೂ ಶಾರ್ದುಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆಯಲಷ್ಟೆ ಶಕ್ತರಾದರು.

ಈ ಬೃಹತ್ ಮೊತ್ತ ಬೆನ್ನತ್ತಿದ ಮುಂಬೈಗೆ ಬ್ಯಾಟಿಂಗ್ ಲೈನ್‌ಅಪ್ ಕೈಕೊಟ್ಟಿತು. ಅನುಭವಿ ಬ್ಯಾಟರ್‌ಗಳಿದ್ದರೂ ಸಾಂಘಿಕ ಹೋರಾಟದ ಕೊರತೆಯಿಂದಾಗಿ ತಂಡಕ್ಕೆ ಸೋಲುಂಟಾಯಿತು. ರೋಹಿತ್ ಶರ್ಮಾ 19 ರನ್ ಗಳಿಸಿ ರಿಟೈರ್ಡ್ ಹರ್ಟ್ ಔಟ್ ಆದರು. ಇವರ ಹಿಂದೆ 22 ಎಸೆತಗಳಲ್ಲಿ 37 ರನ್ ಗಳಿಸಿದ್ದ ರಿಕೆಲ್ಟನ್ ಔಟಾಗಿ ಹೊರನಡೆದರು. ತಿಲಕ್ ವರ್ಮಾ 1 ರನ್ ಗಳಿಸಿ ಬಂದಷ್ಟೆ ವೇಗವಾಗಿ ಪೆವಿಲಿಯನ್ ಹಾದಿ ಹಿಡಿದರು.

ಈ ನಡುವೆ ಮಧ್ಯಮ ಕ್ರಮಾಂಕದಲ್ಲಿ ಒಂದಾದ ಸೂರ್ಯಕುಮಾರ್ ಯಾದವ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಕೊಂಚ ಹೋರಾಟ ನೀಡಿದರೂ ಪಂದ್ಯ ಗೆಲ್ಲಿಸಿಕೊಡಲು ಸಾಧ್ಯವಾಗಲಿಲ್ಲ. ಸೂರ್ಯಕುಮಾರ್ ಯಾದವ್ 22 ಎಸೆತಗಳಲ್ಲಿ 33, ಪಾಂಡ್ಯ 22 ಎಸೆತಗಳಲ್ಲಿ 40 ರನ್ ಗಳಿಸಿ ಔಟಾದರು.

ಕೊನೆಯಲ್ಲಿ ಅಬ್ಬರಿಸಿದ ಶೇರ್ಫಾನೆ ರುದರ್‌ಪೋರ್ಡ್ 31 ಎಸೆತಗಳಲ್ಲಿ 1 ಬೌಂಡರಿ, 9 ಸಿಕ್ಸರ್‌ಗಳಿಂದ ಅಜೇಯ 71 ರನ್ ಗಳಿಸಿಯೂ ಪಂದ್ಯ ಗೆಲ್ಲಲಿಲ್ಲ. ಉಳಿದಂತೆ ನಮನ್ ಧಿರ್ 1, ಮಿಚೆಲ್ ಸ್ಯಾಂಟ್ನರ್ ಅಜೇಯ 8 ರನ್ ಗಳಿಸಿದರು.

ಆರ್‌ಸಿಬಿ ಪರ ಸುಯೇಶ್ ಶರ್ಮಾ 2 ವಿಕೆಟ್, ಜಾಕೋಬ್ ಡಫಿ, ರಸಿಕ್ ಸಲಾಮ್ ದರ್ ಹಾಗೂ ಕೃನಾಲ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular