ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ಐತಿಹಾಸಿಕ ಮತ್ತು ಧಾರ್ಮಿಕ ಪುಣ್ಯಕ್ಷೇತ್ರವಾದ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಏಪ್ರಿಲ್ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದಾರೆ.
ಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪರಮಪೂಜ್ಯ ಜಗದ್ಗುರು ಶ್ರೀ ಭೈರವೈಕ್ಯ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ‘ಗುರು ಭೈರವೈಕ್ಯ ಮಂದಿರ’ವನ್ನು (ಗದ್ದುಗೆ) ಪ್ರಧಾನಿಯವರು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ.
ಮಂದಿರದಲ್ಲಿ ಶ್ರೀಗಳ ಮೂಲ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಏಪ್ರಿಲ್ 10ರಿಂದ 15ರವರೆಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಜರುಗಲಿವೆ.ಉದ್ಘಾಟನೆಯ ಬಳಿಕ ಮಠದ ಆವರಣದಲ್ಲಿರುವ ಬಿಜಿಎಸ್ (BGS) ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವೇಳೆ ಪ್ರಧಾನಿಯವರು ಭಕ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಭಕ್ತರಿಗೆ ನಿರ್ಬಂಧ : ಪ್ರಧಾನಿಯವರ ಭೇಟಿಯ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಟಿಯಿಂದ ಏಪ್ರಿಲ್ 15ರಂದು ಮಠ ಮತ್ತು ದೇವಾಲಯದ ಆವರಣಕ್ಕೆ ಸಾರ್ವಜನಿಕರು ಹಾಗೂ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.ಶ್ರೀಗಳ ಆಶಯದಂತೆ ಈ ಮಂದಿರವನ್ನು ಸುಮಾರು 175*150 ಅಡಿ ವಿಸ್ತೀರ್ಣದಲ್ಲಿ ಕೆಂಪು ಶಿಲೆ ಮತ್ತು ವಿವಿಧ ಬಗೆಯ ಶಿಲಾ ಕಲ್ಲುಗಳನ್ನು ಬಳಸಿ ಅತ್ಯಂತ ಕಲಾತ್ಮಕವಾಗಿ ನಿರ್ಮಿಸಲಾಗಿದೆ. ಬಹಳ ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಜಿಲ್ಲೆಗೆ ಮತ್ತು ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡುತ್ತಿರುವುದು ಭಕ್ತರಲ್ಲಿ ಮತ್ತು ಮಠದ ಅನುಯಾಯಿಗಳಲ್ಲಿ ಹೆಚ್ಚಿನ ಉತ್ಸಾಹ ಮೂಡಿಸಿದೆ.

