ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಮಲುಂಗುಮ್ಮಿ ಜಲಪಾತದಲ್ಲಿ ಫೋಟೋಶೂಟ್ ಮಾಡುವಾಗ ಆಯತಪ್ಪಿ ಬಿದ್ದು ಒಂದೇ ಕುಟುಂಬದ ಮೂವರು ವಿದ್ಯಾರ್ಥಿನಿಯರು ದುರಂತ ಅಂತ್ಯ ಕಂಡಿದ್ದಾರೆ. ಆಂಧ್ರಪ್ರದೇಶದ ಅನಂತಗಿರಿ ಮಂಡಲದ ಮಲುಂಗುಮ್ಮಿ ಜಲಪಾತದ ಬಳಿ ಗುರುವಾರ ಸಂಜೆ ಘೋರ ದುರಂತವೊಂದು ಸಂಭವಿಸಿದೆ.
ಜಲಪಾತದ ಬಂಡೆಯ ಮೇಲೆ ನಿಂತು ಪೋಸ್ ನೀಡುತ್ತಿದ್ದಾಗ ಒಬ್ಬಾಕೆ ನೀರಿನ ಸೆಲೆಗೆ ಬಿದ್ದಿದ್ದು, ಆಕೆಯನ್ನು ರಕ್ಷಿಸಲು ಹೋದ ಇಬ್ಬರು ಸಹೋದರಿಯರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ರಜೆಯ ಮೋಜಿನಲ್ಲಿದ್ದ ಹದಿಹರೆಯದ ಹುಡುಗಿಯರ ಈ ಭೀಕರ ಅವಘಡದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ನಡುಕ ಹುಟ್ಟಿಸಿದೆ.ರೀಲ್ಸ್ ಮತ್ತು ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಮೂವರು ವಿದ್ಯಾರ್ಥಿನಿಯರು ಜಲಪಾತದ ಆಳವಾದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಜಂಬುವಲಸ ಗ್ರಾಮದ ಸಾಲೇಪು ತ್ರಿಷಾ (17), ಸಾಲೇಪು ಪವಿತ್ರಾ (16) ಮತ್ತು ಸಾಲೇಪು ರತ್ನಕುಮಾರಿ (16) ಮೃತ ದುರ್ದೈವಿಗಳು.ಮೃತಪಟ್ಟ ಮೂವರು ಹುಡುಗಿಯರು ಒಂದೇ ಕುಟುಂಬದ ಸಹೋದರರ ಮಕ್ಕಳಾಗಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಬಂಡೆಯ ಮೇಲೆ ನಿಂತು ಫೋಟೋಗೆ ಪೋಸ್ ನೀಡುತ್ತಿದ್ದಾಗ ಒಬ್ಬಾಕೆ ಆಯತಪ್ಪಿ ಬಿದ್ದಿದ್ದಾಳೆ. ಆಕೆಯನ್ನು ರಕ್ಷಿಸಲು ಹೋದ ಉಳಿದ ಇಬ್ಬರೂ ಕೂಡ ನೀರಿನ ಸೆಲೆಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.ಈ ತಂಡದಲ್ಲಿದ್ದ ಅಂಜಲಿ ಎಂಬ ಬಾಲಕಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ಪೊಲೀಸರ ಮನವಿ
“ಪ್ರವಾಸಿ ತಾಣಗಳಲ್ಲಿ ಸಣ್ಣ ನಿರ್ಲಕ್ಷ್ಯವೂ ಜೀವಕ್ಕೆ ಕುತ್ತು ತರುತ್ತದೆ. ಈಜು ಬಾರದಿದ್ದರೂ ಜಲಪಾತದ ಆಳಕ್ಕೆ ಇಳಿಯುವುದು ಅಥವಾ ಅಪಾಯಕಾರಿ ಜಾಗಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಬೇಡ.”

