ಹಾವೇರಿ: ಸಾಲ ವಸೂಲಾತಿಗೆ ಬಂದವರು ಗರ್ಭಿಣಿಯ ಹೊಟ್ಟೆಗೆ ಒದ್ದು ಹಲ್ಲೆ ಮಾಡಿದ್ದರಿಂದ ಅವಳಿ ಮಕ್ಕಳು ಅವಧಿ ಪೂರ್ವ ಜನಿಸಿ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಅಲ್ಲಿಪುರದಲ್ಲಿ ನಡೆದಿದೆ.
ಮಾರ್ಚ್ 28ರಂದು ನಡೆದ ಘಟನೆಯಲ್ಲಿ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗರ್ಭಿಣಿ ಪವಿತ್ರಾ ಲಮಾಣಿ ಅವರ ಅವಳಿ ಮಕ್ಕಳು ಏಪ್ರಿಲ್ 7ರಂದು ಅವಧಿ ಪೂರ್ವ ಜನಿಸಿ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿವೆ. ಪವಿತ್ರಾ ಲಮಾಣಿ ಅವರ ತಾಯಿ ಹಾಲವ್ವ ಅವರು ಹಲ್ಲೆ ಮತ್ತು ಜೀವ ಬೆದರಿಕೆ ಪ್ರಕರಣ ಸಂಬಂಧ ಸವಣೂರು ಠಾಣೆಗೆ ದೂರು ನೀಡಿದ್ದಾರೆ.
ಅಲ್ಲಿಪುರ ಗ್ರಾಮದ ಸುರೇಶ್, ಪರಶುರಾಮ, ಮಹೇಶ್, ಸಕ್ಕೂಬಾಯಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹಲ್ಲೆಗೊಳಗಾಗಿ ಹೊಟ್ಟೆಗೆ ಪೆಟ್ಟು ಬಿದ್ದು ವಿಪರೀತ ನೋವಾಗಿದ್ದರಿಂದ ಅವಧಿಗೂ ಮುನ್ನ ಹೆರಿಗೆ ಮಾಡಲಾಗಿದೆ. ಜನಿಸಿದ ಎರಡೂ ಮಕ್ಕಳು ಕೆಲವೇ ಗಂಟೆಗಳಲ್ಲಿ ಮೃತಪಟ್ಟಿವೆ. ವೈದ್ಯಕೀಯ ಪರೀಕ್ಷೆ ನಡೆಸಿ ಪೊಲೀಸರಿಗೆ ವರದಿ ನೀಡಲು ಜಿಲ್ಲಾಸ್ಪತ್ರೆ ವೈದ್ಯರು ಮುಂದಾಗಿದ್ದಾರೆ.

