HomeIPL 2026IPL 2026: ಗುಜರಾತ್ ವಿರುದ್ಧ ಗೆಲ್ಲುವ ಪಂದ್ಯ ಸೋತ ಡೆಲ್ಲಿ; ಆ 3 ನಿರ್ಧಾರ ನೋಡಿದ್ರೆ...

IPL 2026: ಗುಜರಾತ್ ವಿರುದ್ಧ ಗೆಲ್ಲುವ ಪಂದ್ಯ ಸೋತ ಡೆಲ್ಲಿ; ಆ 3 ನಿರ್ಧಾರ ನೋಡಿದ್ರೆ ಪಕ್ಕಾ ಫಿಕ್ಸಿಂಗ್ ಎಂದ ನೆಟ್ಟಿಗರು!

ನಿನ್ನೆ ( ಏಪ್ರಿಲ್ 8 ) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ 2026ರ ಲೀಗ್ ಹಂತದ 14ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ 1 ರನ್‌ಗಳ ರೋಚಕ ಗೆಲುವನ್ನು ಕಂಡಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 210 ರನ್ ಕಲೆಹಾಕಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 211 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 209 ರನ್ ಕಲೆಹಾಕಿತು.

ಗುಜರಾತ್ ಟೈಟನ್ಸ್ ನೀಡಿದ ಗುರಿಯನ್ನು ಬೆನ್ನಟ್ಟಲು ಮುಂದಾದ ಡೆಲ್ಲಿ ಕ್ಯಾಪಿಟಲ್ಸ್ ಕೊನೆಯಲ್ಲಿ ಡೇವಿಡ್ ಮಿಲ್ಲರ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಗೆಲ್ಲುವ ಸನಿಹಕ್ಕೆ ಬಂದಿತ್ತು. ಕೊನೆಯ ಓವರ್‌ನಲ್ಲಿ 13 ರನ್‌ಗಳ ಅಗತ್ಯವಿತ್ತು. ಪ್ರಸಿದ್ಧ್ ಕೃಷ್ಣ ಎಸೆದ ಕೊನೆಯ ಓವರ್‌ನ ಮೊದಲ ಎಸೆತಕ್ಕೆ ಬೌಂಡರಿ ಬಾರಿಸಿದ ವಿಪ್ರಾಜ್ ನಿಗಮ್ ನಂತರದ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಬೆನ್ನಲ್ಲೆ ಕಣಕ್ಕಿಳಿದ ಕುಲ್‌ದೀಪ್ ಯಾದವ್ ಸಿಂಗಲ್ ತೆಗೆದುಕೊಂಡು ಮಿಲ್ಲರ್‌ಗೆ ಸ್ಟ್ರೈಕ್ ನೀಡಿದರು. 3 ಎಸೆತಗಳಿಗೆ 8 ರನ್ ಬೇಕಿದ್ದಾಗ ಭರ್ಜರಿ ಸಿಕ್ಸರ್ ಬಾರಿಸಿದ ಮಿಲ್ಲರ್ ಓವರ್‌ನ ಐದನೇ ಎಸೆತಕ್ಕೆ ಯಾವುದೇ ರನ್ ಬಾರಿಸಲಿಲ್ಲ ಹಾಗೂ ಒಂದು ರನ್ ಓಡುವ ಅವಕಾಶವಿದ್ದರೂ ಕಡೆಗಣಿಸಿದರು. ಈ ಮೂಲಕ ಕೊನೆಯ ಎಸೆತಕ್ಕೆ ಎರಡು ರನ್ ಬಾರಿಸಬೇಕಾದ ಅನಿವಾರ್ಯತೆ ಎದುರಾಯಿತು. ಕೊನೆಯ ಬೌನ್ಸರ್‌ ಎಸೆತವನ್ನು ಎದುರಿಸುವಲ್ಲಿ ಮಿಲ್ಲರ್ ವಿಫಲರಾದ ಕಾರಣ ಚೆಂಡು ವಿಕೆಟ್ ಕೀಪರ್ ಕೈಸೇರಿತ್ತು. ಈ ಸಮಯದಲ್ಲಿ ರನ್ ಕದ್ದು ಡ್ರಾ ಮಾಡಿಕೊಳ್ಳಲು ಮುಂದಾದರಾದರೂ ಕುಲ್‌ದೀಪ್ ಯಾದವ್ ರನ್‌ಔಟ್ ಆದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ತಮ್ಮ ಕೈನಲ್ಲಿದ್ದ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ಬಿಟ್ಟುಕೊಟ್ಟಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಅನುಮಾನಗಳು ವ್ಯಕ್ತವಾಗುತ್ತಿವೆ. ನೆಟ್ಟಿಗರು ಮೂರು ನಿರ್ಧಾರಗಳನ್ನು ಉಲ್ಲೇಖಿಸಿ ಇವುಗಳಿಂದ ಫಿಕ್ಸಿಂಗ್ ವಾಸನೆ ಬರುತ್ತಿದೆ ಎಂದು ಆರೋಪಿಸಿದ್ದಾರೆ.

ಅನುಮಾನ 1: ಮೊಹಮ್ಮದ್ ಸಿರಾಜ್ ಎಸೆದ 19ನೇ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿದರು. ಮೊದಲ ಎಸೆತಕ್ಕೆ ಸಿಕ್ಸರ್ ಬಾರಿಸಿದ ಮಿಲ್ಲರ್ ಎರಡನೇ ಎಸೆತಕ್ಕೂ ಸಿಕ್ಸರ್ ಚಚ್ಚಲು ಯತ್ನಿಸಿದರು. ಚೆಂಡು ಜಾಹೀರಾತು ಕುಷನ್ ಮೇಲೆ ಬಿದ್ದಂತೆ ಕಾಣುತ್ತಿತ್ತು. ಆದರೆ ಮೂರನೇ ಅಂಪೈರ್ ಅದನ್ನು ಬೌಂಡರಿ ಎಂದು ಪರಿಗಣಿಸಿ ನಿರ್ಧಾರ ಹೊರಡಿಸಿದರು. ಈ ನಿರ್ಧಾರ ಮಾಡುವಾಗ ಆ ಬೌಂಡರಿ ದೃಶ್ಯವನ್ನು ಪರದೆ ಮೇಲಾಗಲಿ ಅಥವಾ ನೇರಪ್ರಸಾರದಲ್ಲಾಗಲಿ ತೋರಿಸಲಿಲ್ಲ. ಅಲ್ಲದೇ ಅದು ಕ್ಲೀನ್ ಸಿಕ್ಸರ್ ಎಂದು ಅನುಮಾನ ಹೊರಹಾಕಿದ್ದಾರೆ ನೆಟ್ಟಿಗರು.

ಅನುಮಾನ 2: ಡೆಲ್ಲಿ ಕ್ಯಾಪಿಟಲ್ಸ್‌ಗೆ ಅಂತಿಮವಾಗಿ ಗೆಲ್ಲಲು ಎರಡು ಎಸೆತಗಳಲ್ಲಿ ಎರಡು ರನ್ ಗಳಿಸಬೇಕಾದ ಅಗತ್ಯವಿತ್ತು. ಈ ಸಮಯದಲ್ಲಿ ಸ್ಟ್ರೈಕ್‌ನಲ್ಲಿದ್ದ ಮಿಲ್ಲರ್ ಕೊನೆಯ ಓವರ್‌ನ ಐದನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳುವ ಅವಕಾಶವಿದ್ದರೂ ಓಡಲಿಲ್ಲ. ಮತ್ತೊಂದು ತುದಿಯಲ್ಲಿದ್ದ ಕುಲ್‌ದೀಪ್ ರನ್ ಓಡುವ ಯತ್ನ ಮಾಡಿದರಾದರೂ ಮಿಲ್ಲರ್ ಓಡಲಿಲ್ಲ. ಒಂದುವೇಳೆ ಈ ರನ್ ಓಡಿದ್ದರೆ ಪಂದ್ಯ ಅಲ್ಲಿಯೇ ಡ್ರಾ ಆಗುತ್ತಿತ್ತು. ಒಂದುವೇಳೆ ಕುಲ್‌ದೀಪ್ ಯಾದವ್ ಕೊನೆಯ ಎಸೆತದಲ್ಲಿ ರನ್ ಗಳಿಸದಿದ್ದರೂ ಸೂಪರ್ ಓವರ್ ನಡೆಯುತ್ತಿತ್ತು ಎಂದು ನೆಟ್ಟಿಗರು ಅನುಮಾನ ಹೊರಹಾಕಿದ್ದಾರೆ.

ಅನುಮಾನ 3: ಕೊನೆಯ ಓವರ್‌ನ ಐದನೆ ಎಸೆತಕ್ಕೆ ಯಾವುದೇ ರನ್ ಬಾರದ ಕಾರಣ ಕೊನೆಯ ಎಸೆತದಲ್ಲಿ ಡೆಲ್ಲಿಗೆ ಎರಡು ರನ್ ಬಾರಿಸಬೇಕಾದ ಅನಿವಾರ್ಯತೆ ಇತ್ತು. ಮಿಲ್ಲರ್ ಬ್ಯಾಟ್ ತಪ್ಪಿದ ಚೆಂಡು ವಿಕೆಟ್ ಕೀಪರ್ ಕೈಸೇರಿತ್ತು. ಒಂದು ರನ್ ಕದ್ದು ಡ್ರಾ ಮಾಡಿಕೊಳ್ಳುವ ಯತ್ನ ನಡೆಯಿತಾದರೂ ಕುಲ್‌ದೀಪ್ ರನ್‌ಔಟ್ ಆದರು. ಆದರೆ ಮೂರನೇ ಅಂಪೈರ್ ಕುಲ್‌ದೀಪ್ ಡೈವ್ ಬಿದ್ದದ್ದನ್ನು ಪರದೆ ಮೇಲೆ ತೋರಿಸಲಿಲ್ಲ ಎಂದು ಅನುಮಾನ ಹೊರಹಾಕಿದ್ದಾರೆ.

ಇನ್ನು ನೆಟ್ಟಿಗರ ಈ ಮೇಲಿನ ಮೂರು ಅನುಮಾನಗಳ ಪೈಕಿ ಮೂರನೆಯದ್ದಕ್ಕೆ ಉತ್ತರ ಸಿಕ್ಕಿದೆ. ಏಕೆಂದರೆ ಪಂದ್ಯದ ವೇಳೆ ಕುಲ್‌ದೀಪ್ ರನ್‌ಔಟ್ ಆದದ್ದನ್ನು ಪರದೆ ಮೇಲೆ ತೋರಿಸಲಾಗಿದೆ. ಉಳಿದ ಎರಡು ಅನುಮಾನಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular