ಬೆಂಗಳೂರು: ರಾಜ್ಯದಲ್ಲಿ ಹಳೆಯ ವಾಹನಗಳಿಗೂ ಹೆಚ್.ಎಸ್.ಆರ್.ಪಿ. ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದೆ. ಈ ಕುರಿತಾಗಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳಿಗೆ ಕಿವಿಗೊಡದೆ ಕಡ್ಡಾಯವಾಗಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ಹಳೆಯ ವಾಹನಗಳಿಗೆ ಹೆಚ್.ಎಸ್.ಆರ್.ಪಿ. ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ನಿಯಮಗಳನ್ನು ಸಾರಿಗೆ ಇಲಾಖೆ ಹಿಂಪಡೆದುಕೊಂಡಿದೆ. ಹೀಗಾಗಿ ಹೆಚ್.ಎಸ್.ಆರ್.ಪಿ. ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಿಲ್ಲ ಎನ್ನುವ ಸುದ್ದಿಗಳು ಕೆಲ ಮಾಧ್ಯಮಗಳಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಸ್ಪಷ್ಟನೆ ನೀಡಿದ್ದು, ಯಾವುದೇ ವದಂತಿಗಳನ್ನು ನಂಬದಂತೆ ಮನವಿ ಮಾಡಿದೆ.
2019ರ ಏಪ್ರಿಲ್ ಗಿಂತ ಮುಂಚೆ ನೋಂದಣಿಯಾದ ವಾಹನಗಳಿಗೂ ಹೆಚ್.ಎಸ್.ಆರ್.ಪಿ. ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಈ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ರಾಜ್ಯದಲ್ಲಿ ಹೆಚ್.ಎಸ್.ಆರ್.ಪಿ. ಅಳವಡಿಕೆ ಸಂಬಂಧ ಹೈಕೋರ್ಟ್ ರಿಟ್ ಅರ್ಜಿ ಆಲಿಸಿದ್ದು, ಪ್ರಕರಣ ಇತ್ಯರ್ಥಪಡಿಸುವಂತೆ ಏಕಸದಸ್ಯ ಪೀಠಕ್ಕೆ ವರ್ಗಾಯಿಸಿದೆ. ಆದೇಶದಲ್ಲಿಯೂ ಸಾರಿಗೆ ಇಲಾಖೆಯ ಆದೇಶಕ್ಕೆ ಯಾವುದೇ ತಡೆಯಾಜ್ಞೆ ನೀಡಿಲ್ಲ. ಬದಲಾಗಿ ಹೆಚ್.ಎಸ್.ಆರ್.ಪಿ. ವಿಷಯದಲ್ಲಿ ತರಾತುರಿಯ ಕ್ರಮ ಕೈಗೊಳ್ಳದಂತೆ ನಿರ್ದೇಶನ ನೀಡಿದೆ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.


