ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸರಣಿ ಹತ್ಯೆಗಳು ಜನರನ್ನು ಬೆಚ್ಚಿಬೀಳಿಸುತ್ತಿವೆ. ಇಂದು ಮಧ್ಯಾಹ್ನ ಸುಮಾರು 12 ಗಂಟೆಯ ಸುಮಾರಿಗೆ ಜೆ.ಸಿ. ನಗರದ ಮುಖ್ಯ ರಸ್ತೆಯಲ್ಲಿ ವಿಜಯ್ ಎಂಬ ಯುವಕನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಮೃತ ವಿಜಯ್ (22) ಜೆ.ಸಿ. ನಗರದ ನಿವಾಸಿಯಾಗಿದ್ದು, ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿದೆ ಎನ್ನಲಾಗಿದೆ. ಜನದಟ್ಟಣೆ ಇರುವ ಮುಖ್ಯ ರಸ್ತೆಯಲ್ಲೇ ದುಷ್ಕರ್ಮಿಗಳು ವಿಜಯ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದು, ತೀವ್ರ ರಕ್ತಸ್ರಾವದಿಂದ ವಿಜಯ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಿರಣ್ ವಿಜಯ್ ಎಂಬುವವರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಜೆ.ಸಿ. ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹಂತಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

