ದಾವಣಗೆರೆ: ರಾಜ್ಯದಲ್ಲಿ ಉಪಚುನಾವಣಾ ಅಖಾಡ ರಂಗೇರಿದೆ. ಅಭ್ಯರ್ಥಿಗಳು, ರಾಜಕೀಯ ನಾಯಕರ ಪ್ರಚಾರದ ಭರಾಟೆ ಜೋರಾಗಿದೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿಯ ಘಟಾನುಘಟಿ ನಾಯಕರು ಬೀಡುಬಿಟ್ಟಿದ್ದು, ತಮ್ಮ ಅಭ್ಯರ್ಥಿಗಳ ಪರ ಮತಯಾಚಿಸುತ್ತಿದ್ದಾರೆ.
ಮತ್ತೊಂದೆಡೆ ಅಸ್ಸಾಂ ಚುನಾವಣೆ ಜವಾಬ್ದಾರಿ ವಹಿಸಿಕೊಂಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅಸ್ಸಾಂ ನಲ್ಲಿ ಚುನಾವಣೆ ಗೆಲ್ಲಲು ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಈ ನಡುವೆ ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಮತ್ತು ಜಗತ್ತಿನ ತಂತ್ರಜ್ಞಾದಲ್ಲಿಯೂ ಕರ್ನಾಟಕ ಮಾದರಿ ಅನುಸರಿಸುವಂತೆ ಹೇಳುತ್ತಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಸ್ಸಾಂ ಚುನಾವಣೆ ಗೆಲುವಿನ ತಂತ್ರಗಾರಿಕೆ ಕುರಿತು ಎಐ (AI) ನೀಡಿದ ಪ್ರತಿಕ್ರಿಯೆಯನ್ನು ಸಚಿವರು ಬಹಿರಂಗಪಡಿಸಿದ್ದಾರೆ. ಅಸ್ಸಾಂ ಚುನಾವಣೆ ಗೆಲ್ಲಲು ಏನು ಮಾಡಬೇಕು ಎಂದು ಡಿ.ಕೆ.ಶಿವಕುಮಾರ್ ಎಐ ಬಳಿ ಕೇಳಿದಾಗ ಕರ್ನಾಟಕ ಮಾಡೆಲ್ ಅನುಸರಿಸಿ ಎಂದು ಹೇಳಿದೆ. ಕರ್ನಾಟಕ ಮಾದರಿಯ ಚುನಾವಣೆ ತಂತ್ರ ರೂಪಿಸುವಂತೆ ಎಐ ತಂತ್ರಜ್ಞಾನ ಹೇಳಿದೆ ಎಂದರು.
ಚುನಾವಣೆಯಲ್ಲಿ ಪ್ರಪಂಚದಲ್ಲೇ ಕರ್ನಾಟಕ ಮಾಡೆಲ್ ಅನ್ನು ಅನುಸರಿಸಿ ಎಂದು ಸೂಚಿಸಿದೆ.ಇದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಉತ್ತಮ ಕೆಲಸ, ಒಳ್ಳೆಯ ಆಡಳಿತ ವೈಖರಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ನಾವು ಉತ್ತಮ ಕೆಲಸಗಳನ್ನು ಮಾಡುತ್ತಿದ್ದೇವೆ ಎಂಬುದಕ್ಕೆ ಇದು ಉದಾಹರಣೆ. ನಾವೇನು ಕೇಂದ್ರ ಸರ್ಕಾರದ ಸರ್ಟಿಫಿಕೇಟ್ ಪಡೆಯಬೇಕಾ? ವಿಶ್ವನಾಥ್ ಸರ್ಟಿಫಿಕೇಟ್ ಪಡೆಯಬೇಕಾ ಅಥವಾ ಸಿ.ಟಿ.ರವಿ ಅವರ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಾ? ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಹೇಳಿಕೆಯನ್ನು ಸ್ವಲ್ಪ ಗಮನಕ್ಕೆ ತೆಗೆದುಕೊಂಡು ಯೋಚಿಸಿ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಏನಾದರೂ ಕೊಡುತ್ತಿದೆಯಾ? ಸ್ವಲ್ಪನಾದರೂ ಅನುದಾನ, ಮಾನ್ಯತೆ ಕೊಡುತ್ತಿದೆಯಾ? ಯಡಿಯೂರಪ್ಪ ಆಡಳಿತದ ಕಾಲದಲ್ಲೂ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಾನ್ಯತೆ ಕೊಡಲಿಲ್ಲ, ಬೊಮ್ಮಾಯಿ ಕಾಲದಲ್ಲಿಯೂ ಕೊಡಲಿಲ್ಲ, ಇವತ್ತೂ ಕೊಡುತ್ತಿಲ್ಲ. ಹೀಗಿರುವಾಗ ಬಿಜೆಪಿ-ಜೆಡಿಎಸ್ ನಾಯಕರಿಗೆ ಮಾತನಾಡಲು ಏನು ಹಕ್ಕಿದೆ? ಪ್ರಶ್ನಿಸಿದರು.
ರಾಜ್ಯದ ಎಲ್ಲಾ ಸಮುದಾಯಗಳ ಅಭಿವೃದ್ಧಿ, ಎಲ್ಲಾ ಕ್ಷೇತ್ರಗಳನ್ನು ಸಮತೋಲದಲ್ಲಿಟ್ಟುಕೊಂಡು ಸಮರ್ಪಕ ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿರುವುದು ರಾಜ್ಯ ಕಾಂಗ್ರೆಸ್ ಸರ್ಕಾರ. ಯಾವ ಸಮಾಜಕ್ಕೂ ಕಾಂಗ್ರೆಸ್ ಸರ್ಕಾಅರ ಅನ್ಯಾಯ ಮಾಡಿಲ್ಲ ಎಂದು ಹೇಳಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಆಡಳಿತದ ಬಗ್ಗೆ ಎಲ್ಲರಿಗೂ ಹೆಮ್ಮೆಯಿದೆ ಎಂದು ಹೇಳಿದರು.

