ಹಾಸನ: ಶಾಸಕ ಶಿವಲಿಂಗೇಗೌಡ ಅವರ ಆಪ್ತನ ಮಗ ಸೋಫಿಯಾನ್ ಸಮಿವುಲ್ಲಾ ಗೂಂಡಾಗಿರಿ ಮೆರೆದಿದ್ದು, ದಂಪತಿಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಅರಸಿಕರೆ ಪಟ್ಟಣದಲ್ಲಿ ನಡೆದಿದೆ.
ದೇವಸ್ಥಾನದಿಂದ ವಾಪಾಸ್ ಆಗುತ್ತಿದ್ದ ದಂಪತಿ ಮೇಲೆ ಕ್ಷುಲ್ಲಕ ಕಾರಣಕ್ಕೆ ತಗಾದೆ ತೆಗೆದು ಕಿರಿಕ್ ಮಾಡಿದ್ದಲ್ಲದೇ, ಮನ ಬಂದಂತೆ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿದ್ದಾನೆ. ದಂಪತಿ ಕೈ ಮುಗಿದು ಬೇಡಿಕೊಂಡರೂ ಬಿಟ್ಟಿಲ್ಲ. ತನ್ನ ಪುಂಡರ ಗ್ಯಾಂಗ್ ಕರೆಸಿ ರಕ್ತ ಬರುವಂತೆ ಥಳಿಸಿದ್ದಾನೆ.
ಅರಸಿಕೆರೆಯ ಪುರಾಣ ಪ್ರಸಿದ್ದ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ರಥೋತ್ಸವಕ್ಕೆ ಬಂದಿದ್ದ ದಂಪತಿ ರಥೋತ್ಸವ ಮುಗಿಸಿ, ವಿಶೇಷ ಪೂಜೆ, ದೇವರ ದರ್ಶನ ಪಡೆದು ವಾಪಸ್ ಆಗುತ್ತಿದ್ದರು. ಈ ವೇಳೆ ತನ್ನ ಬೈಕ್ ನಲ್ಲಿ ವೇಗವಾಗಿ ಬಂದ ಸೋಫಿಯಾನ್ ಸಮಿವುಲ್ಲಾ, ದಂಪತಿಗೆ ಬೈಕ್ ಟಚ್ ಮಾಡಿದ್ದಾನೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ದಂಪತಿ ಮೇಲೆ ಹಲ್ಲೆ ನಡೆಸಿದ್ದಾನೆ.
ಅಲ್ಲದೇ ಇದೇ ವಿಚಾರವಾಗಿ ದಂಪತಿ ತೆರಳುತ್ತಿದ್ದ ಬೈಕ್ ಅಡ್ಡಗಟ್ಟಿ ರಾದ್ಧಾಂತ ನಡೆಸಿದ್ದಾನೆ. ವ್ಯಕ್ತಿಯನ್ನು ಹಿಡಿದು ಎಳೆದಾಡಿ ಮನಬಂದತೆ ಹಲ್ಲೆ ನಡೆಸಿದ್ದಾನೆ. ಅಮಾಯಕ ದಂಪತಿಯನ್ನು ಹಿಂಸಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಿವುಲ್ಲಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

