HomeKarnatakaಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಸಂಕಷ್ಟ

ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಸಂಕಷ್ಟ

ಬೆಂಗಳೂರು: ಬಟ್ಟೆ ಬ್ಯಾಗ್ ಖರೀದಿ ಪ್ರಕ್ರಿಯೆಯಲ್ಲಿ ಕೋಟ್ಯಂತರ ರೂ. ಅಕ್ರಮವೆಸಗಿದ ಆರೋಪ ಸಂಬಂಧ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆಗೆ ಪೂರ್ವಾನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಇದರಿಂದಾಗಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಸಂಕಷ್ಟ ಎದುರಾಗಿದೆ.

ಮೈಸೂರಿನ ವಕೀಲ ಎನ್.ಆರ್. ರವಿಚಂದ್ರೇಗೌಡ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎನ್. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಪುರಸ್ಕರಿಸಿದೆ. ರೋಹಿಣಿ ಸಿಂಧೂರಿ ವಿರುದ್ಧ ತನಿಖೆ ಕೈಗೊಳ್ಳಲು ಪೂರ್ವಾನುಮತಿ ನೀಡಲು ನಿರಾಕರಿಸಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಆದೇಶವನ್ನು ರದ್ದುಪಡಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಈ ಆದೇಶದ ಪ್ರತಿ ಸ್ವೀಕರಿಸಿದ ದಿನದಿಂದ ನಾಲ್ಕು ವಾರಗಳಲ್ಲಿ ನ್ಯಾಯದ ಹಿತದೃಷ್ಟಿಯಿಂದ ತನಿಖೆಗೆ ಅನುಮತಿ ನೀಡಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭ್ರಷ್ಟಾಚಾರದಂತಹ ಗಂಭೀರ ಆರೋಪ ಕೇಳಿ ಬಂದಾಗ ಅವುಗಳನ್ನು ಆರಂಭದಲ್ಲಿಯೇ ನಂದಿಸುವುದು ಸಾಧುವಲ್ಲ ನಿಜಾಂಶವನ್ನು ತನಿಖಾ ಪ್ರಕ್ರಿಯೆ ಮೂಲಕ ಬಹಿರಂಗಗೊಳಿಸಬೇಕು. ಆಗ ಮಾತ್ರ ಜನರಿಗೆ ಸತ್ಯ ಗೊತ್ತಾಗುತ್ತದೆ. ರೋಹಿಣಿ ಸಿಂಧೂರಿ ಕೇವಲ ಆಡಳಿತಾತ್ಮಕ ಲೋಪ ಎಸಗಿದ್ದಾರೆ ಎಂಬುದಲ್ಲ, ಇದು ಅವರ ನಿರ್ಧಾರದಿಂದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂಬುದು ಗಮನಾರ್ಹ ಎಂದು ನ್ಯಾಯಪೀಠ ಹೇಳಿದೆ.

ಭ್ರಷ್ಟಾಚಾರ ಒಂದು ಪಿಡುಗಾಗಿದ್ದು ಇದನ್ನು ಕ್ಯಾನ್ಸರ್, ಪ್ಲೇಗ್ ಮತ್ತು ಸಾಂಕ್ರಾಮಿಕ ಎಂದು ನಾನಾ ರೀತಿಯಲ್ಲಿ ವರ್ಣಿಸಲಾಗಿದೆ ಎಂಬ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ನ್ಯಾಯಾಲಯ ಉಲ್ಲೇಖಿಸಿದೆ. ಭ್ರಷ್ಟಾಚಾರ ನಿಯಂತ್ರಿಸಬೇಕು. ಪ್ರಜಾಪ್ರಭುತ್ವ ಸಂಸ್ಥೆಗಳನ್ನು ನಾಶ ಮಾಡುವ ಸಾಮರ್ಥ್ಯ ಭ್ರಷ್ಟಾಚಾರಕ್ಕೆ ಇದೆ. ಭ್ರಷ್ಟಾಚಾರ ರಾಷ್ಟ್ರದ ಶತ್ರು, ಭ್ರಷ್ಟ ಸಾರ್ವಜನಿಕ ಸೇವಕರು ಯಾವುದೇ ಶ್ರೇಣಿ ಅಥವಾ ಅಂತಸ್ತನ್ನು ಹೊಂದಿದ್ದರೂ ಅಂತವರನ್ನು ಪತ್ತೆ ಹಚ್ಚಿ ಶಿಕ್ಷಿಸಲು ಹಿಂಜರಿಯಬಾರದು ಎಂದು ಆದೇಶಿಸಿದೆ.

ಸ್ವಚ್ಛ ಭಾರತ ಅಭಿಯಾನ ಅಂಗವಾಗಿ ಮೈಸೂರು ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಿಸಬೇಕು. ಪ್ಲಾಸ್ಟಿಕ್ ಬಳಕೆ ಬದಲಿಗೆ ಬಟ್ಟೆಯ ಚೀಲ ಬಳಸಬೇಕು ಎಂದು ನಗರ, ಗ್ರಾಮಾಂತರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ನಿರ್ದೇಶಿಸಿದ್ದರು. ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಚೀಲಕ್ಕೆ 13 ರೂಪಾಯಿ ದರ ಇದ್ದರೂ ಪ್ರತಿ ಚೀಲಕ್ಕೆ 52 ರೂ. ದರ ನೀಡಿ ಖರೀದಿಸಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 7.65 ಕೋಟಿ ರೂ.ನಷ್ಟವಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರ್ಥಿಕ ದುರ್ಬಲ ವರ್ಗಗಳಿಗೆ ಪ್ರಯೋಜನ ನೀಡುವ ಉದ್ದೇಶದಿಂದ ಕಲ್ಯಾಣ ಯೋಜನೆಗೆ ಮೀಸಲಿಟ್ಟ ಹಣವನ್ನು ಈ ಕೈ ಚೀಲಗಳ ಖರೀದಿಗೆ ಬಳಸಿ ಭ್ರಷ್ಟಾಚಾರ ಎಸಗಲಾಗಿದೆ ಎಂದು ರವಿಚಂದ್ರೇಗೌಡ ದೂರು ನೀಡಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular