ಬೆಂಗಳೂರು: ಗುತ್ತಿಗೆ/ಹೊರಗುತ್ತಿಗೆ ಹಾಗೂ ಗೌರವಧನದ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರ ಅವಲಂಬಿತರಿಗೆ 5 ಲಕ್ಷ ರೂ.ವರೆಗೆ ನಗದು ರಹಿತ ಆರೋಗ್ಯ ಯೋಜನೆ ಜಾರಿಗೊಳಿಸಿರುವಂತೆಯೇ ಅರ್ಹ ದಿನಗೂಲಿ ನೌಕರರಿಗೂ ಸಹ ಈ ಸೌಲಭ್ಯವನ್ನು ವಿಸ್ತರಿಸುವ ಬಗ್ಗೆ ಸರ್ಕಾರದ ಆದೇಶ ಹೊರಡಿಸಿದೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರು ಮತ್ತು ಅವರ ಅವಲಂಬಿತರಿಗೆ ವಾರ್ಷಿಕ 5 ಲಕ್ಷ ರೂಪಾಯಿವರೆಗೆ ನಗದು ರಹಿತ ಚಿಕಿತ್ಸೆಗೆ ಆರೋಗ್ಯ ಯೋಜನೆ ವಿಸ್ತರಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಕಳೆದ ವರ್ಷ ಜೂನ್ ನಲ್ಲಿ ಗುತ್ತಿಗೆ, ಹೊರಗುತ್ತಿಗೆ ಮತ್ತು ಗೌರವಧನದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು ಮೂರು ಲಕ್ಷ ನೌಕರರು ಹಾಗೂ ಅವಲಂಬಿತರಿಗೆ ಈ ನಗದು ರಹಿತ ಆರೋಗ್ಯ ವಿಮಾ ಸೇವೆ ಜಾರಿಗೊಳಿಸಲಾಗಿತ್ತು.
ಈ ಸೌಲಭ್ಯವನ್ನು ತಮಗೂ ವಿಸ್ತರಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಮನವಿ ಮಾಡಿದ್ದು, ಅವರ ಬೇಡಿಕೆಗೆ ಸರ್ಕಾರ ಸ್ಪಂದಿಸಿ ಈ ಯೋಜನೆ ವಿಸ್ತರಿಸಬೇಕಾದ ಕಾರಣ 5 ಲಕ್ಷ ರೂ. ನಗದು ರಹಿತ ಆರೋಗ್ಯ ಭರವಸೆ ಯೋಜನೆ ಸೌಲಭ್ಯವನ್ನು ದಿನಗೂಲಿ ನೌಕರರಿಗೆ ವಿಸ್ತರಿಸಲಾಗಿದೆ. ಈ ಸಂಬಂಧ ನೌಕರರು ತಮ್ಮ ಪಾಲಿನ ವಂತಿಗೆ ಪಾವತಿಸಬೇಕು. ಉಳಿದ ಮೊತ್ತವನ್ನು ರಾಜ್ಯ ಸರ್ಕಾರ ಭರಿಸುತ್ತದೆ.


