ಜಾಗತಿಕ ರಾಜತಾಂತ್ರಿಕ ಸಂಘರ್ಷ ಈಗ ತಂತ್ರಜ್ಞಾನ ವಲಯಕ್ಕೆ ಕಾಲಿಟ್ಟಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಅಮೆರಿಕದ ಪ್ರಮುಖ 18 ಟೆಕ್ ಕಂಪನಿಗಳನ್ನು “ಕಾನೂನುಬದ್ಧ ಗುರಿಗಳು” (Legitimate Targets) ಎಂದು ಘೋಷಿಸಿದ್ದು, ಅವುಗಳ ಮೇಲೆ ಸರಣಿ ದಾಳಿ ನಡೆಸುವುದಾಗಿ ಎಚ್ಚರಿಸಿದೆ. ಆಪಲ್, ಮೈಕ್ರೋಸಾಫ್ಟ್, ಗೂಗಲ್ ಮತ್ತು ಮೆಟಾದಂತಹ ಜಾಗತಿಕ ದೈತ್ಯ ಸಂಸ್ಥೆಗಳಿಗೆ ನೀಡಿರುವ ಈ ಬೆದರಿಕೆಯು ಇಡೀ ವಿಶ್ವವನ್ನೇ ಆತಂಕಕ್ಕೆ ತಳ್ಳಿದೆ.
ಹೌದು. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಅಮೆರಿಕದ ಪ್ರಮುಖ 18 ತಂತ್ರಜ್ಞಾನ ಕಂಪನಿಗಳ ವಿರುದ್ಧ ದಾಳಿ ನಡೆಸುವುದಾಗಿ ತೀವ್ರ ಎಚ್ಚರಿಕೆ ನೀಡಿದೆ. ಈ ಪಟ್ಟಿಯಲ್ಲಿ ಆಪಲ್ (Apple), ಮೈಕ್ರೋಸಾಫ್ಟ್ (Microsoft), ಗೂಗಲ್ (Google), ಮೆಟಾ (Meta), ಟೆಸ್ಲಾ (Tesla) ಮತ್ತು ಬೋಯಿಂಗ್ (Boeing) ನಂತಹ ಜಾಗತಿಕ ದೈತ್ಯ ಕಂಪನಿಗಳು ಸೇರಿವೆ.
ಇರಾನ್ ಮೇಲಿನ ಇಸ್ರೇಲ್ ಮತ್ತು ಅಮೆರಿಕದ ದಾಳಿಗಳಿಗೆ ಈ ಕಂಪನಿಗಳು ತಾಂತ್ರಿಕ ಸಹಾಯ, ಕೃತಕ ಬುದ್ಧಿಮತ್ತೆ (AI) ಮತ್ತು ಗುಪ್ತಚರ ಸೇವೆಗಳನ್ನು ಒದಗಿಸುತ್ತಿವೆ ಎಂದು ಇರಾನ್ ಆರೋಪಿಸಿದೆ. ಈ ಕಂಪನಿಗಳನ್ನು “ಪತ್ತೇದಾರಿ ಸಂಸ್ಥೆಗಳು” ಎಂದು ಇರಾನ್ ಕರೆದಿದೆ.ಏಪ್ರಿಲ್ 1, 2026 ರಂದು ಟೆಹ್ರಾನ್ ಸಮಯ ರಾತ್ರಿ 8 ಗಂಟೆಯಿಂದ (ಭಾರತೀಯ ಕಾಲಮಾನ ರಾತ್ರಿ 10:30) ಈ ಕಂಪನಿಗಳ ಪ್ರಾದೇಶಿಕ ಕಚೇರಿಗಳ ಮೇಲೆ ದಾಳಿ ಆರಂಭಿಸುವುದಾಗಿ ಇರಾನ್ ಘೋಷಿಸಿದೆ.
ಸ್ಥಳಾಂತರಕ್ಕೆ ಸೂಚನೆ: ಈ ಕಂಪನಿಗಳ ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಪ್ರಾಣ ರಕ್ಷಣೆಗಾಗಿ ತಕ್ಷಣವೇ ಸ್ಥಳದಿಂದ ಹೊರಬರಬೇಕು ಮತ್ತು ಕಚೇರಿಗಳ ಸುತ್ತಮುತ್ತಲಿನ 1 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು IRGC ಎಚ್ಚರಿಸಿದೆ.
ಗುರಿಯಾಗಲಿರುವ ಕಂಪನಿಗಳು: ಆಪಲ್, ಮೈಕ್ರೋಸಾಫ್ಟ್, ಗೂಗಲ್, ಮೆಟಾ ಜೊತೆಗೆ ಇಂಟೆಲ್ (Intel), ಎನ್‌ವಿಡಿಯಾ (Nvidia), ಸಿಸ್ಕೋ (Cisco), ಒರಾಕಲ್ (Oracle), ಮತ್ತು ಅಮೆಜಾನ್ (Amazon) ನಂತಹ ಕಂಪನಿಗಳ ಮೂಲಸೌಕರ್ಯಗಳು ಇರಾನ್‌ನ ಗುರಿಯಾಗಿವೆ.
ಫೆಬ್ರವರಿ 28 ರಿಂದ ಆರಂಭವಾಗಿರುವ ಅಮೆರಿಕ-ಇರಾನ್ ಸಂಘರ್ಷದಲ್ಲಿ ಇರಾನ್‌ನ ಪ್ರಮುಖ ಮಿಲಿಟರಿ ನಾಯಕರ ಹತ್ಯೆಗೆ ಪ್ರತೀಕಾರವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.ಇರಾನ್‌ನ ಈ ಎಚ್ಚರಿಕೆಯಿಂದಾಗಿ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ತಂತ್ರಜ್ಞಾನ ಕಂಪನಿಗಳ ಷೇರುಗಳ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಅಮೆರಿಕ ಸರ್ಕಾರವು ತನ್ನ ನಾಗರಿಕರ ಸುರಕ್ಷತೆಯ ಬಗ್ಗೆ ತೀವ್ರ ನಿಗಾ ವಹಿಸಿದೆ.

