ಬೆಂಗಳೂರು : ಪ್ರತಿ ವರ್ಷದಂತೆ ಈ ಬಾರಿಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಏಪ್ರಿಲ್ 1 ರಿಂದ ಅನ್ವಯವಾಗುವಂತೆ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರವನ್ನು ಪರಿಷ್ಕರಿಸಿದೆ. ಈ ಹೊಸ ದರ ಪಟ್ಟಿಯ ಅನ್ವಯ ರಾಜ್ಯದ ಒಟ್ಟು 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ಮಾಡುವ ವಾಹನ ಸವಾರರು ಹೆಚ್ಚಿನ ಹಣ ಪಾವತಿಸಬೇಕಿದೆ.
ಹೊಸ ಹಣಕಾಸು ವರ್ಷದ ಆರಂಭದ ದಿನವಾದ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ, ಕರ್ನಾಟಕದ ಪ್ರಮುಖ 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರವನ್ನು ಹೆಚ್ಚಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ಧರಿಸಿದೆ. ಟೋಲ್ ದರದಲ್ಲಿ ಶೇಕಡಾ 4 ರಿಂದ 5 ರಷ್ಟು ಹೆಚ್ಚಳವಾಗಲಿದೆ.
ವಾರ್ಷಿಕ ಪಾಸ್: ಮಾಸಿಕ/ವಾರ್ಷಿಕ ಪಾಸ್ ದರದಲ್ಲೂ ಏರಿಕೆಯಾಗುತ್ತಿದ್ದು, 3,000 ರೂ. ಇದ್ದ ಶುಲ್ಕ ಈಗ 3,075 ರೂ.ಗೆ ಏರಲಿದೆ.
ಅನ್ವಯವಾಗುವ ವಾಹನಗಳು: ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಹೊರತುಪಡಿಸಿ ಕಾರು, ಬಸ್, ಲಾರಿ ಸೇರಿದಂತೆ ಉಳಿದೆಲ್ಲಾ ವರ್ಗದ ವಾಹನಗಳಿಗೆ ಈ ಹೊಸ ದರ ಅನ್ವಯಿಸುತ್ತದೆ.
ದರ ಏರಿಕೆಯಾಗುವ ಪ್ರಮುಖ 9 ಹೆದ್ದಾರಿಗಳ ಪಟ್ಟಿ:
- ರಾಷ್ಟ್ರೀಯ ಹೆದ್ದಾರಿ 48: ಬೆಂಗಳೂರು – ತುಮಕೂರು – ಹಾವೇರಿ – ಬೆಳಗಾವಿ.
- ರಾಷ್ಟ್ರೀಯ ಹೆದ್ದಾರಿ 275: ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇ.
- ರಾಷ್ಟ್ರೀಯ ಹೆದ್ದಾರಿ 44: ಬೆಂಗಳೂರು – ಹೈದರಾಬಾದ್.
- ರಾಷ್ಟ್ರೀಯ ಹೆದ್ದಾರಿ 75: ಬೆಂಗಳೂರು – ಹಾಸನ – ಮಂಗಳೂರು.
- ರಾಷ್ಟ್ರೀಯ ಹೆದ್ದಾರಿ 75: ಬೆಂಗಳೂರು – ಹೊಸಕೋಟೆ – ಕೋಲಾರ.
- ರಾಷ್ಟ್ರೀಯ ಹೆದ್ದಾರಿ 66: ಮಂಗಳೂರು – ಉಡುಪಿ – ಕುಂದಾಪುರ.
- ರಾಷ್ಟ್ರೀಯ ಹೆದ್ದಾರಿ 50/52: ವಿಜಯಪುರ – ಹೊಸಪೇಟೆ – ಚಿತ್ರದುರ್ಗ.
- ರಾಷ್ಟ್ರೀಯ ಹೆದ್ದಾರಿ 150A: ಹಿರಿಯೂರು – ಬಳ್ಳಾರಿ – ಜೇವರ್ಗಿ.
- ರಾಷ್ಟ್ರೀಯ ಹೆದ್ದಾರಿ 766: ಮೈಸೂರು ಟು ಗುಂಡ್ಲಪೇಟೆ.
ಈ ಬೆಲೆ ಏರಿಕೆಯು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಪ್ರಯಾಣ ಶುಲ್ಕ ಹೆಚ್ಚಿಸಿರುವುದು ಸವಾರರಿಗೆ ಹೊರೆಯಾಗಿ ಪರಿಣಮಿಸಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ (ಹೊಸಕೋಟೆ ಮತ್ತು ಬೆತಮಂಗಲ/KGF ನಡುವೆ)
ಕಾರುಗಳಿಗೆ ಮಾತ್ರ:
- ಸುಂದರಪಾಳ್ಯ (KGF ಕಡೆ) ಇಂದ (ಹೊಸಕೋಟೆ ಕಡೆ):
- ಒಂದೇ ಪ್ರಯಾಣ (Single journey): ₹150
- ಹಿಂತಿರುಗುವ ಪ್ರಯಾಣ (Return journey): ₹225
- ಮಾಸಿಕ ಪಾಸ್ (Monthly pass): ₹4,985
- (ಹೊಸಕೋಟೆ ಕಡೆ) ಇಂದ ಸುಂದರಪಾಳ್ಯ (KGF ಕಡೆ):
- ಒಂದೇ ಪ್ರಯಾಣ (Single journey): ₹145
- ಹಿಂತಿರುಗುವ ಪ್ರಯಾಣ (Return journey): ₹220
- ಮಾಸಿಕ ಪಾಸ್ (Monthly pass): ₹4,860
ಸಾದಹಳ್ಳಿ ಗೇಟ್ (ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ)
ವಾಹನ ಸವಾರರು ಪಾವತಿಸಬೇಕಾದ ಪರಿಷ್ಕೃತ ದರಗಳು ಇಲ್ಲಿವೆ
| ವಾಹನ ಪ್ರಕಾರ | ಒಂದೇ ಪ್ರಯಾಣ | ಹಿಂತಿರುಗುವ ಪ್ರಯಾಣ | ಮಾಸಿಕ ಪಾಸ್ |
| ಕಾರು/ಜೀಪ್ | ₹120 (ಬದಲಾವಣೆ ಇಲ್ಲ) | ₹185 (ಹಿಂದೆ ₹180) | ₹4,070 |
| ಲಘು ವಾಣಿಜ್ಯ ವಾಹನ/ಮಿನಿ ಬಸ್ | ₹190 (ಹಿಂದೆ ₹185) | ₹280 (ಹಿಂದೆ ₹275) | ₹6,255 |
| ಟ್ರಕ್/ಬಸ್ | ₹375 (ಹಿಂದೆ ₹370) | ₹565 (ಹಿಂದೆ ₹550) | ₹12,575 |

