ಮಂಗಳೂರು: ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನ ಬಾಗಿಲು ಇದ್ದಕ್ಕಿದ್ದಂತೆ ಓಪನ್ ಆಗಿದ್ದು, ಇಬ್ಬರು ವಿದ್ಯಾರ್ಥಿಗಳು ಬಸ್ ನಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ರೇಶ್ಮೆ ರೋಡ್ ಬಳಿ ಚಲಿಸುತ್ತಿದ್ದ ಬಸ್ ನ ಬಾಗಿಲು ಹಠಾತ್ ಆಗಿ ಓಪನ್ ಆಗಿದ್ದು, ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಈ ಭಯಾನಕ ದೃಶ್ಯದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಎಸ್ಎಸ್ಎಲ್ಸಿ ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಸೇರಿ ಒಂದೇ ಮನೆಯ ಇಬ್ವರು ವಿದ್ಯಾರ್ಥಿನಿಯರು ಸಾರಿಗೆ ಬಸ್ ನಿಂದ ಬಿದ್ದು ಗಾಯಗೊಂಡಿದ್ದಾರೆ. ಬಸ್ನ ಬಾಗಿಲು ಏಕಾಏಕಿ ತೆರೆದಿದ್ದರಿಂದ ಅಕ್ಕ ಕೆಳಗೆ ಬೀಳುತ್ತಿದ್ದಾಗ, ಆಕೆಯನ್ನು ರಕ್ಷಿಸಲು ತಂಗಿ ಮುಂದಾಗಿದ್ದಾಳೆ. ಆಕೆಯೂ ನಿಯಂತ್ರಣ ತಪ್ಪಿ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಇಬ್ಬರಿಗೂ ಗಾಯಗಳಾಗಿವೆ.
ತಕ್ಷಣ ಸ್ಥಳೀಯರ ಸಹಕಾರದಿಂದ ಚಿಕಿತ್ಸೆಗಾಗಿ ಬೆಳ್ತಂಗಡಿ ಹಾಗೂ ಉಜಿರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಓರ್ವ ವಿದ್ಯಾರ್ಥಿನಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ತೆರಳುತ್ತಿದ್ದರೆ, ಮತ್ತೋರ್ವ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತಿದ್ದಾರೆ. ಇವರು ನ್ಯಾಯತರ್ಪು ಗ್ರಾಮದ ಕಲೈತೊಟ್ಟು ನಾಗರಾಜ ಹಾಗೂ ರೂಪ ದಂಪತಿಗಳ ಮಕ್ಕಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಚಿಕಿತ್ಸೆ ಬಳಿಕ ಸಹಾಯಕಿಯ ನೆರವಿನೊಂದಿಗೆ ಗಾಯಾಳು ವಿದ್ಯಾರ್ಥಿನಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾಳೆ ಎಂದು ತಿಳಿದುಬಂದಿದೆ.

