ಮುಂಬೈ : ಐಪಿಎಲ್ 2026ರ ಸೀಸನ್ ಸಂಭ್ರಮದ ನಡುವೆಯೇ ಕ್ರೀಡಾಲೋಕದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಐಪಿಎಲ್ ಪಂದ್ಯಗಳ ನೇರ ಪ್ರಸಾರ ವಿಭಾಗದಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಜಾನ್ ವಿಲಿಯಂ ಮುಂಬೈನ ಹೋಟೆಲ್ ಕೊಠಡಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಹೌದು. ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಪಂದ್ಯಗಳ ನೇರ ಪ್ರಸಾರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ಇಂಜಿನಿಯರ್ ಜಾನ್ ವಿಲಿಯಂ (John William) ಅವರು ಮುಂಬೈನ ಹೋಟೆಲ್ ಕೊಠಡಿಯಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಮಾರ್ಚ್ 29 ರಂದು ನಡೆದ ಮುಂಬೈ ಇಂಡಿಯನ್ಸ್ ಮತ್ತು ಕೆಕೆಆರ್ ಪಂದ್ಯದ ವೇಳೆ ವಾಂಖೆಡೆ ಕ್ರೀಡಾಂಗಣದಲ್ಲಿ ಕರ್ತವ್ಯದಲ್ಲಿದ್ದ ಇವರು, ಪಂದ್ಯ ಮುಗಿಸಿ ಹೋಟೆಲ್‌ಗೆ ಮರಳಿದ ನಂತರ ಶವವಾಗಿ ಪತ್ತೆಯಾಗಿದ್ದಾರೆ.
ಜಾನ್ ವಿಲಿಯಂ ಅವರು ಮಾರ್ಚ್ 24ರಂದು ಮುಂಬೈನ ಹೋಟೆಲ್‌ಗೆ ಆಗಮಿಸಿದ್ದರು.ಮಾರ್ಚ್ 29ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ವೇಳೆ ಅವರು ಕರ್ತವ್ಯದಲ್ಲಿದ್ದರು.ಪಂದ್ಯ ಮುಗಿದ ನಂತರ ಹೋಟೆಲ್ ರೂಮ್‌ಗೆ ಮರಳಿದ್ದ ಅವರು, ಮಾರ್ಚ್ 30ರಂದು ಹೋಟೆಲ್ ಸಿಬ್ಬಂದಿಯ ಯಾವುದೇ ಕರೆಗಳಿಗೆ ಸ್ಪಂದಿಸಿರಲಿಲ್ಲ.
ಅನುಮಾನಗೊಂಡ ಸಿಬ್ಬಂದಿ ತುರ್ತು ಕೀ ಬಳಸಿ ರೂಮ್ ತೆರೆದಾಗ ಜಾನ್ ವಿಲಿಯಂ ಅಚೇತನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಹೋಟೆಲ್ ವೈದ್ಯರು ಪರೀಕ್ಷಿಸಿದಾಗ ಅವರು ಈಗಾಗಲೇ ಮೃತಪಟ್ಟಿರುವುದು ದೃಢಪಟ್ಟಿದೆ.
ಪೊಲೀಸ್ ತನಿಖೆ: ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಯಾವುದೇ ಬಲವಾದ ಪುರಾವೆಗಳು ಲಭ್ಯವಿಲ್ಲದ ಕಾರಣ ಮುಂಬೈ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಘಟನೆಯು 2020ರಲ್ಲಿ ಖ್ಯಾತ ನಿರೂಪಕ ಡೀನ್ ಜೋನ್ಸ್ ಅವರು ಇದೇ ರೀತಿ ಹೋಟೆಲ್‌ನಲ್ಲಿ ಮೃತಪಟ್ಟಿದ್ದನ್ನು ನೆನಪಿಸುವಂತಿದೆ.

