ಮಹಿಳೆಯೊಬ್ಬರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಾರ್ಚ್ 23 ರಂದು ಈ ಘಟನೆ ನಡೆದಿದ್ದು, ಸ್ಟೋರ್ ಒಳಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಆರೋಪಿಯ ಅಸಭ್ಯ ವರ್ತನೆ ಸಂಪೂರ್ಣವಾಗಿ ಸೆರೆಯಾಗಿದೆ. ಸದ್ಯ ಪೊಲೀಸರು ಆರೋಪಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಲಾಸ್ ಏಂಜಲೀಸ್ ನಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಮಹಿಳೆ ಸೂಪರ್ ಮಾರ್ಕೆಟ್‌ನಲ್ಲಿ ವಸ್ತುಗಳನ್ನು ಖರೀದಿಸುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ ಆಕೆಯ ಹತ್ತಿರ ಬಂದು ಅಸಭ್ಯವಾಗಿ ವರ್ತಿಸಿದ್ದಾನೆ. ಆಕೆಯನ್ನು ಅನುಚಿತವಾಗಿ ಸ್ಪರ್ಶಿಸಿ ದೌರ್ಜನ್ಯ ಎಸಗಿದ್ದಾನೆ. ಈ ವೇಳೆ ಆತನ ಕೈಯಲ್ಲಿ ಮೊಬೈಲ್ ಫೋನ್ ಇತ್ತು ಎಂದು ತಿಳಿದುಬಂದಿದೆ.ಘಟನೆಯಿಂದ ಆಘಾತಕ್ಕೊಳಗಾದ ಮಹಿಳೆ ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಲಾಂಚ್ ಏಂಜಲೀಸ್ ಕೌಂಟಿ ಶರೀಫ್ ಇಲಾಖೆಯ (LASD) ಅಧಿಕಾರಿಗಳು ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.
ಸ್ಟೋರ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಯ ಕೃತ್ಯ ದೃಢಪಟ್ಟಿದೆ. ಆರೋಪಿಯು ಸುಮಾರು 35 ವರ್ಷ ಪ್ರಾಯದವನಾಗಿದ್ದು, ಗಡ್ಡ ಬಿಟ್ಟಿದ್ದಾನೆ ಹಾಗೂ ಡೆನಿಮ್ ಶರ್ಟ್ ಮತ್ತು ರಿಪ್ಡ್ ಜೀನ್ಸ್ ಧರಿಸಿದ್ದಾನೆ ಎಂದು ಪೊಲೀಸರು ಗುರುತಿಸಿದ್ದಾರೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಾರ್ವಜನಿಕ ಸ್ಥಳದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಎಂದು ಕೇಸ್ ದಾಖಲಿಸಿಕೊಂಡಿದ್ದಾರೆ. ಆರೋಪಿಯ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ತಿಳಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಸ್ಟೋರ್ ಮ್ಯಾನೇಜ್‌ಮೆಂಟ್ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದೆ.

