ಕೊಪ್ಪಳ: ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಮನೆ ಬಳಿ ಆಟವಾಡಿಕೊಂಡಿದ್ದ ಮೂರು ವರ್ಷದ ಹೆಣ್ಣು ಮಗು ನೀರಿನ ಸಂಪಿಗೆ ಬಿದ್ದು ಮೃತಪಟ್ಟಿದೆ.
ಕಾರಟಗಿಯ ರಾಜೀವ್ ಗಾಂಧಿನಗರದ ಕಳಕಪ್ಪ ಅವರ ಪುತ್ರಿ ಹಂಶಿಕಾ ಮೃತಪಟ್ಟ ಮಗು. ಮನೆಯ ಮುಂದೆ ಪಕ್ಕದ ಮನೆಯ ಬಾಲಕನೊಂದಿಗೆ ಆಟವಾಡಿಕೊಂಡಿದ್ದ ವೇಳೆ ಘಟನೆ ನಡೆದಿದೆ. ಹಂಶಿಕಾ ಮತ್ತು ನೆರೆ ಮನೆಯ ಹರ್ಷವರ್ಧನ್ ಎನ್ನುವ ಮತ್ತೊಂದು ಮಗು ಮನೆಯ ಮುಂದೆ ಶನಿವಾರ ಬೆಳಗ್ಗೆ ಆಟವಾಡುತ್ತಿದ್ದರು. ಮನೆಯ ಹೊರಗಿರುವ ನೀರಿನ ಸಂಪ್ ನಲ್ಲಿ ವಂಶಿಕಾ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾಳೆ.
ಪೋಷಕರು ಮತ್ತು ನೆರೆಹೊರೆಯವರು ಕೂಡಲೇ ಮಗುವನ್ನು ರಕ್ಷಿಸಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಆದರೆ ಈ ವೇಳೆಗಾಗಲೇ ಮಗು ಮೃತಪಟ್ಟಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಕಾರಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವಿನ ಪೋಷಕರು ಮತ್ತು ನೆರೆಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು.

