ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಾಪ್ತಿಯಲ್ಲಿ, 85 ವರ್ಷ ಹಾಗೂ ಮೇಲ್ಪಟ್ಟ (85+) ಮತ್ತು ವಿಶೇಷ ವಿಕಲಚೇತನರ ಮನೆ ಬಾಗಿಲಿಗೆ ತೆರಳಿ ಅಂಚೆ ಮತಪತ್ರಗಳ ಮೂಲಕ ಮತದಾನ ಮಾಡುವ ಪ್ರಕ್ರಿಯೆ ಏಪ್ರಿಲ್ 1 ಮತ್ತು 2 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ.
ಈಗಾಗಲೇ ಅಂಚೆ ಮತದಾನ ಮಾಡಲು ಅರ್ಜಿ ಸಲ್ಲಿಸಿರುವ ಎಲ್ಲಾ ಮತದಾರರು ತಮ್ಮ ಮನೆಯ ಮತಕ್ಷೇತ್ರದಲ್ಲಿ ಇದ್ದು, ಈ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳಿಗೆ ಸಹಕಾರ ನೀಡಿ ಮತದಾನ ಮಾಡುವಂತೆ ಚುನಾವಣಾಧಿಕಾರಿ, ನಂ-107 ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಹಾಗೂ ಉಪ ವಿಭಾಗಾಧಿಕಾರಿಗಳು ದಾವಣಗೆರೆ ಉಪ ವಿಭಾಗ ಸಂತೋಷ್ ಕುಮಾರ್ ತಿಳಿಸಿದ್ದಾರೆ.
15.37 ಲಕ್ಷ ರೂ. ನಗದು ವಶ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಒಟ್ಟು 148.97 ಲೀಟರ್ ಅಂದಾಜು ರೂ. 91738 ಮೊತ್ತದಷ್ಟು ಮದ್ಯ ವಶಪಡಿಸಿಕೊಳ್ಳಲಾಗಿದೆ, 15,37,000 ರೂ. ನಗದನ್ನು ಇದುವರೆಗೆ ವಶಪಡಿಸಿಕೊಂಡಿದ್ದು ಅದರಲ್ಲಿ 7,05,000 ರೂ. ನಗದನ್ನು ಸಮರ್ಪಕ ದಾಖಲೆ ಸಲ್ಲಿಸಿದವರಿಗೆ ಹಿಂದಿರುಗಿಸಲಾಗಿದೆ. ಉಳಿದ 8,32,000/- ರೂ. ಗಳನ್ನು ಖಜಾನೆಯಲ್ಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದ್ದಾರೆ.

