ಹಾಸನ: ಹಾಸನ ಜಿಲೆಯ ಸಕಲೇಶಪುರ ತಾಲೂಕಿನ ಪ್ರಸಿದ್ಧ ಭೈರವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡುತ್ತಿದ್ದವರ ಮೇಲೆ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಹಲ್ಲೆ ಘಟನೆ ತಾರಕ್ಕೇರಿದ್ದು, ಪೊಲೀಸ್ ಠಾಣೆಯ ಎದುರೇ ಹೊಡೆದಾಡಿಕೊಂಡಿದ್ದಾರೆ. ಇಂದು ಮುಂಜಾನೆ ಬೆಂಗಳೂರು ಹಾಗೂ ಹಾಸನದಿಂದ ಬಂದಿದ್ದ ನಾಲ್ಕು ಫೋಟೋಗ್ರಾಫಿ ತಂಡಗಳು ಶೂಟಿಂಗ್ ಮಾಡುತ್ತಿದ್ದಾಗ ಸ್ಥಳಕ್ಕೆ ಆಗಮಿಸಿದ ಕಿಡಿಗೇಡಿಗಳು ದೇವಸ್ಥಾನದ ಪಾವಿತ್ರತೆಗೆ ಧಕ್ಕೆಯುಂಟುಮಾಡುತ್ತಿದ್ದೀರಿ ಎಂದು ಆರೋಪಿಸಿ ವಿನಾಕಾರಣ ಗಲಾಟೆ ಆರಂಭಿಸಿದ್ದಾರೆ.
ಫೋಟೋ ಗ್ರಾಫರ್ ಗಳು ಅನಗತ್ಯವಾಗಿ ತೊಂದರೆ ಕೊಡದಂತೆ ಕೇಳಿಕೊಂಡರೂ ಬಿಡದ ಪುಂಡರು, ಚೇತನ್, ಯಶು, ಸೋಮಶೇಖರ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ. ಭೈರವೇಶ್ವರ ಬೆಟ್ಟ ಹಾಗೂ ದೇವಸ್ಥಾನದ ಆವರಣದಲ್ಲಿ ಸಿನಿಮಾ ಚಿತ್ರೀಕರಣಕೂಡ ನಡೆಯುತ್ತವೆ.
ಲಕ್ಷಾಂತರ ರೂಪಾಯಿ ಕ್ಯಾಮರಾ, ಮೊಬೈಲ್ ಗಳನ್ನು ಜಖಂಗೊಳಿಸಿ ಪುಂಡಾಟ ಮೆರೆದಿದ್ದಾರೆ. ಮೇಕಪ್ ಆರ್ಟಿಸ್ಟ್ ಗಳ ಮೇಲೂ ಹಲ್ಲೆ ಮಾಡಿದ್ದಾರೆ. ಘಟನೆ ಬಗ್ಗೆ ಸಕಲೇಶಪುರ ಗ್ರಾಮಾಂತರ ಠಾಣೆಗೆ ದೂರು ನೀಡಲು ಬಂದಾಗ ಪೊಲೀಸರ ಮುಂದೆಯೇ ಎರಡೂ ಗುಂಪುಗಳ ನಡುವೆ ಮತ್ತೆ ಗಲಾಟೆಯಾಗಿದೆ. ಅಲ್ಲದೇ ಹೊಡೆದಾಟವೂ ನಡೆದಿದೆ. ಹಲ್ಲೆಗೊಳಗಾದ ಫೋಟೋಗ್ರಾಫರ್ ಓರ್ವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

