ಯಾದಗಿರಿ ಜಿಲ್ಲೆಯ ಚಾಮನಹಳ್ಳಿ ತಾಂಡದಲ್ಲಿ ನಡೆದಿದ್ದ ಆಟೋ ಚಾಲಕನ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಪತ್ನಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ಆಟೋ ಚಾಲಕ ಸಾಗರ್ ರಾಠೋಡ್ (35) ಎಂದು ಗುರುತಿಸಲಾಗಿದೆ. ಪತ್ನಿ ಪೂಜಾ, ಪ್ರಿಯತಮ ರೆಡ್ಡಿ ರಾಠೋಡ್ ಮತ್ತು ಸುಪಾರಿ ಪಡೆದ ಮಹೇಶ ಆರೋಪಿಗಳು.
ಘಟನೆ ಹಿನ್ನೆಲೆ
ಪತ್ನಿ ಪೂಜಾ ಮತ್ತು ರೆಡ್ಡಿ ರಾಠೋಡ್ ನಡುವೆ ಕಳೆದ ಮೂರು ವರ್ಷಗಳಿಂದ ಅಕ್ರಮ ಸಂಬಂಧವಿತ್ತು. ಈ ಸಂಬಂಧಕ್ಕೆ ಪತಿ ಸಾಗರ್ ಅಡ್ಡಿಯಾಗಿದ್ದರಿಂದ ಆತನನ್ನು ಮುಗಿಸಲು ಇಬ್ಬರೂ ಸ್ಕೆಚ್ ಹಾಕಿದ್ದರು. ಪ್ರಿಯತಮ ರೆಡ್ಡಿ ರಾಠೋಡ್, ಸಾಗರ್ನನ್ನು ಕೊಲ್ಲಲು ಮಹೇಶ್ ಎಂಬಾತನಿಗೆ 1 ಲಕ್ಷ ರೂ. ಸುಪಾರಿ ನೀಡಿದ್ದನು. ಮಾರ್ಚ್ 22ರಂದು ಬಾಡಿಗೆಯ ನೆಪದಲ್ಲಿ ಸಾಗರ್ನನ್ನು ಕರೆಸಿಕೊಂಡ ಮಹೇಶ್, ಲಿಂಗೇರಿ ಬಳಿ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ.
ಕೊಲೆಯಾದ ನಂತರ ಇದು ಅಪಘಾತ ಎಂದು ತೋರಿಸಲು ಮೃತದೇಹವನ್ನು ಆಟೋದಲ್ಲಿ ಹಾಕಿ ಕಾರಿನಿಂದ ಡಿಕ್ಕಿ ಹೊಡೆಸಲಾಗಿತ್ತು. ಆದರೆ ಪೊಲೀಸರಿಗೆ ಅನುಮಾನ ಬಂದು ಸಾಗರ್ ಫೋನ್ ದಾಖಲೆಗಳನ್ನು ಪರಿಶೀಲಿಸಿದಾಗ ಮಹೇಶ್ ಸಿಕ್ಕಿಬಿದ್ದಿದ್ದಾನೆ. ತೀವ್ರ ವಿಚಾರಣೆಯ ಬಳಿಕ ಮಹೇಶ್ ಸತ್ಯ ಒಪ್ಪಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಪೂಜಾ ಮತ್ತು ರೆಡ್ಡಿ ರಾಠೋಡ್ನನ್ನು ಕೂಡ ಅರೆಸ್ಟ್ ಮಾಡಿದ್ದಾರೆ.

