ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ಶಾಂತವೇರಿ ಗೋಪಾಲ ಗೌಡ ಆಸ್ಪತ್ರೆಯ (ವಿಕ್ಟೋರಿಯಾ ಆಸ್ಪತ್ರೆ) ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.
ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಗಂಭೀರ ಅವ್ಯವಸ್ಥೆಗಳು ಬೆಳಕಿಗೆ ಬಂದಿವೆ. ಐಸಿಯುನಲ್ಲಿ ಅವಧಿ ಮೀರಿದ ಔಷಧಿಗಳು ಪತ್ತೆಯಾಗಿದ್ದು, ಖಾಲಿ ಹಾಸಿಗೆಗಳಿದ್ದರೂ ತುರ್ತು ರೋಗಿಗೆ ದಾಖಲಾತಿ ನಿರಾಕರಿಸಿರುವುದು ಗಮನಕ್ಕೆ ಬಂದಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ , ವೆಂಟಿಲೇಟರ್ ದೋಷದಿಂದ ಹಾಸಿಗೆಗಳು ಬಳಸಿಲ್ಲ ಎಂದು ಹೇಳಿರುವುದು ಆಸ್ಪತ್ರೆಯ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದಿದ್ದಾರೆ. ಪ್ರಕರಣದ ವರದಿಯನ್ನು ಮುಖ್ಯ ಕಾರ್ಯದರ್ಶಿ ಸೇರಿದಂತೆ ಸಂಬಂಧಿತ ಅಧಿಕಾರಿಗಳಿಗೆ ಕಳುಹಿಸಲು ಸೂಚಿಸಲಾಗಿದೆ.
ಆಸ್ಪತ್ರೆ ಆವರಣದಲ್ಲಿ ಖಾಸಗಿ ಆಂಬ್ಯುಲೆನ್ಸ್ ಚಾಲಕರು ಮತ್ತು ಮಧ್ಯವರ್ತಿಗಳು ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಅವರು ವೈದ್ಯರನ್ನು ಸಂಪರ್ಕಿಸಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲು ಒತ್ತಾಯಿಸುತ್ತಿದ್ದರೆಂಬ ಆರೋಪವೂ ಕೇಳಿಬಂದಿದೆ. ಕೆಲವು ಸಿಬ್ಬಂದಿ ಖಾಸಗಿ ಆಂಬ್ಯುಲೆನ್ಸ್ ಬಳಸುವಂತೆ ರೋಗಿಗಳ ಬಂಧುಗಳ ಮೇಲೆ ಒತ್ತಡ ಹೇರಿರುವುದು ತಿಳಿದುಬಂದಿದೆ.
ಈ ಹಿನ್ನೆಲೆ, ಖಾಸಗಿ ಆಂಬ್ಯುಲೆನ್ಸ್ ಸೇವೆಯನ್ನು ನಿಯಂತ್ರಿಸಲು ಪ್ರೀಪೇಯ್ಡ್ ವ್ಯವಸ್ಥೆ ಜಾರಿಗೆ ತರಬೇಕೆಂದು ಲೋಕಾಯುಕ್ತರು ಸೂಚ್ನೆ ನೀಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡಿರುವ ವಿವರಗಳನ್ನು ನೀಡಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ.
ಇದೇ ವೇಳೆ ಟ್ರಾಮಾ ಕೇರ್ ಸೆಂಟರ್‌ನ ಸಮಸ್ಯೆಗಳ ಕುರಿತು ಡಾ. ಅಸೀಮಾ ಅವರು ಮಾಹಿತಿ ನೀಡಿದ್ದು, ಹಾಸಿಗೆಗಳ ಕೊರತೆಯಿಂದ ಖಾಸಗಿ ಆಂಬ್ಯುಲೆನ್ಸ್ ಚಾಲಕರು ಹಾಗೂ ಮಧ್ಯವರ್ತಿಗಳು ರೋಗಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.

