ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಅಕ್ರಮ ಸಂಬಂಧದ ಕಿಚ್ಚು ಭೀಕರ ಅವಳಿ ಕೊಲೆಯಲ್ಲಿ ಅಂತ್ಯವಾಗಿದೆ. ಪತಿಯ ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಲು ಹೋದ ಮಹಿಳೆ ಮತ್ತು ಆಕೆಯ ಸಹೋದರನನ್ನು ಅಪ್ರಾಪ್ತ ಬಾಲಕನೊಬ್ಬ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಾಗ್ವಾದ ತಾರಕಕ್ಕೇರಿದಾಗ ನಡೆದ ಈ ಆಕ್ರೋಶದ ಕೃತ್ಯ ಇಡೀ ನಗರವನ್ನು ಬೆಚ್ಚಿಬೀಳಿಸಿದೆ.
ಹೌದು. ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಅಪ್ರಾಪ್ತ ಬಾಲಕನೊಬ್ಬ ಮಹಿಳೆ ಹಾಗೂ ಆಕೆಯ ಸಹೋದರನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.ಕೊಲೆಯಾದವರನ್ನು ಯಮುನಾ (36) ಮತ್ತು ಆಕೆಯ ಸಹೋದರ ಸುದೀಪ್ (34) ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ : ಯಮುನಾ ಅವರ ಪತಿ ಮಲ್ಲೇಗೌಡ ಎಂಬುವವರು ಛಾಯಾ ಎಂಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರವಾಗಿ ಮಾತನಾಡಲು ಯಮುನಾ ಮತ್ತು ಸುದೀಪ್ ಅವರು ಛಾಯಾ ಅವರ ಮನೆಗೆ ಹೋಗಿದ್ದರು. ಅಲ್ಲಿ ಮಾತಿನ ಚಕಮಕಿ ನಡೆದು ವಾಗ್ವಾದ ತಾರಕಕ್ಕೇರಿದೆ. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಛಾಯಾ ಅವರ ಅಪ್ರಾಪ್ತ ಮಗ, ಕೋಪದಲ್ಲಿ ಮಚ್ಚಿನಿಂದ ಯಮುನಾ ಮತ್ತು ಸುದೀಪ್ ಇಬ್ಬರನ್ನೂ ಮನಬಂದಂತೆ ಕಡಿದು ಹತ್ಯೆ ಮಾಡಿದ್ದಾನೆ.
ಸ್ನೇಹದಿಂದ ಶುರುವಾಗಿ ಸಂಘರ್ಷದಲ್ಲಿ ಅಂತ್ಯ
ತಿಗಳರಪಾಳ್ಯದಲ್ಲಿ ಯಮುನಾ ಮತ್ತು ಛಾಯಾ ಕುಟುಂಬಗಳು ಎದುರುಬದುರು ಮನೆಯಲ್ಲಿ ವಾಸವಿದ್ದವು. ಯಮುನಾಳ ಪತಿ ಮಲ್ಲೇಗೌಡ ಫ್ಯಾಬ್ರಿಕೇಷನ್ ಘಟಕ ನಡೆಸುತ್ತಾ ಆರ್ಥಿಕವಾಗಿ ಸದೃಢರಾಗಿದ್ದರು. ಛಾಯಾಳ ಪತಿ ಆಟೋ ಚಾಲಕರಾಗಿದ್ದರು. ನೆರೆಹೊರೆಯವರಾಗಿದ್ದ ಕಾರಣ ಎರಡೂ ಕುಟುಂಬಗಳ ನಡುವೆ ಗಾಢವಾದ ಸ್ನೇಹವಿತ್ತು. ಕಷ್ಟದ ಸಮಯದಲ್ಲಿ ಛಾಯಾ ಕುಟುಂಬ ಮಲ್ಲೇಗೌಡನ ಬಳಿ ಸಾಲ ಪಡೆದು, ಅದನ್ನು ಸಕಾಲಕ್ಕೆ ಮರಳಿಸಿ ವಿಶ್ವಾಸ ಗಳಿಸಿತ್ತು.
‘ಆತ್ಮೀಯತೆ’ ತಂದ ತಲ್ಲಣ:
ಇದೇ ವಿಶ್ವಾಸ ಕಾಲಕ್ರಮೇಣ ಛಾಯಾ ಮತ್ತು ಮಲ್ಲೇಗೌಡರ ನಡುವೆ ಅನೈತಿಕ ಸಂಬಂಧಕ್ಕೆ ನಾಂದಿ ಹಾಡಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಯಮುನಾ ಮತ್ತು ಛಾಯಾ ನಡುವೆ ಜಗಳ ಆರಂಭವಾಗಿತ್ತು. ಈ ಸಂಬಂಧ ಈ ಹಿಂದೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ಸಂಧಾನದ ಮೂಲಕ ಪ್ರಕರಣ ಇತ್ಯರ್ಥಗೊಂಡಿತ್ತು.
ಮನೆ ಬದಲಿಸಿದರೂ ನಿಲ್ಲದ ಅಕ್ರಮ ಸಂಬಂಧ:
ಸಂಘರ್ಷದ ಬಳಿಕ ಛಾಯಾ ಕುಟುಂಬ ಮನೆ ಬದಲಾಯಿಸಿತ್ತು. ಆದರೂ ಮಲ್ಲೇಗೌಡ ಗುಟ್ಟಾಗಿ ಛಾಯಾ ಮನೆಗೆ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ. ಈ ವಿಷಯ ತಿಳಿದು ಮತ್ತಷ್ಟು ಕೆರಳಿದ ಯಮುನಾ, ಗುರುವಾರ ಬೆಳಗ್ಗೆ ಛಾಯಾಗೆ ಕರೆ ಮಾಡಿ ತೀವ್ರವಾಗಿ ನಿಂದಿಸಿದ್ದರು.
ತಾಯಿಯ ನಿಂದನೆ ಕಂಡು ಕೆರಳಿದ ಪುತ್ರ
ಯಮುನಾ ಫೋನ್‌ನಲ್ಲಿ ಬೈಯುತ್ತಿದ್ದನ್ನು ಕೇಳಿಸಿಕೊಂಡ ಛಾಯಾಳ 16 ವರ್ಷದ ಮಗ ಸಿಡಿಮಿಡಿಗೊಂಡಿದ್ದಾನೆ. ತಾಯಿಯಿಂದ ಮೊಬೈಲ್ ಕಸಿದುಕೊಂಡು, “ಬಾರೇ ನಮ್ಮ ಮನೆ ಹತ್ತಿರ, ನೋಡ್ತೀನಿ ಅದೇನು ಮಾಡ್ತೀಯಾ” ಎಂದು ಸವಾಲು ಹಾಕಿದ್ದಾನೆ. ಈ ಸವಾಲು ಸ್ವೀಕರಿಸಿ ತನ್ನ ತಮ್ಮ ಸುದೀಪ್ ಜೊತೆ ಛಾಯಾಳ ಮನೆಗೆ ಹೋದ ಯಮುನಾ ಮೇಲೆ ಬಾಲಕ ಮಚ್ಚಿನಿಂದ ದಾಳಿ ನಡೆಸಿದ್ದಾನೆ. ದಾಳಿಯಲ್ಲಿ ಅಕ್ಕ-ತಮ್ಮ ಇಬ್ಬರೂ ಸ್ಥಳದಲ್ಲೇ ಬಲಿಯಾಗಿದ್ದಾರೆ.

