ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯ ಸೇವೆಗಳ ಬಲವರ್ಧನೆ ಮತ್ತು ತಜ್ಞ ವೈದ್ಯರ ನಿರಂತರ ಲಭ್ಯತೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ತಜ್ಞ ವೈದ್ಯರು ತಾವು ಕಾರ್ಯನಿರ್ವಹಿಸುವ ಕೇಂದ್ರ ಸ್ಥಾನದಲ್ಲಿಯೇ ಕಡ್ಡಾಯವಾಗಿ ವಾಸಿಸಬೇಕು ಎಂದು ಆದೇಶಿಸಿದೆ.
ತುರ್ತು, ತಾಯಂದಿರ ಹಾಗೂ ನವಜಾತ ಶಿಶುಗಳ ಸೇವೆಗೆ 24 ಗಂಟೆಗಳು ಲಭ್ಯತೆ ಖಚಿತಪಡಿಸಬೇಕು. ಇದಕ್ಕಾಗಿ ತಜ್ಞ ವೈದ್ಯರು ದೂರದ ಸ್ಥಳಗಳಿಂದ ಸಂಚಾರ ಮಾಡಬಾರದು. ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ ಮೂಲಕ ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಕೇಂದ್ರ ಸ್ಥಾನದಿಂದ ಹಾಜರಾತಿ ಹಾಕಬೇಕು.
ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಒಬ್ಬರು ಸ್ತ್ರೀರೋಗ ತಜ್ಞರು ಮಾತ್ರ ಕಾರ್ಯನಿರ್ವಹಿಸುತ್ತಿದ್ದರೆ ಅವರನ್ನು ಬೇರೆಡೆಗೆ ನಡೆಯುವ ಟ್ಯುಬೆಕ್ಟಮಿ ಶಿಬಿರಗಳಿಗೆ ನಿಯೋಜಿಸಬಾರದು ಎಂದು ತಿಳಿಸಲಾಗಿದೆ. ಅವರನ್ನು ಬೇರೆಡೆಗೆ ಯಾವುದೇ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರ ಹುದ್ದೆ ಖಾಲಿ ಇದ್ದಲ್ಲಿ ಕರ್ತವ್ಯದಲ್ಲಿರುವ ವೈದ್ಯರು ಸಂಬಂಧಿತ ಜಿಲ್ಲಾ ಆಸ್ಪತ್ರೆ ಅಥವಾ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗಳ ಸ್ತ್ರೀರೋಗ ತಜ್ಞರೊಂದಿಗೆ ಸಂಪರ್ಕಿಸಿ ತಜ್ಞರ ಸಲಹೆ ಪಡೆಯಬೇಕು ಎಂದು ತಿಳಿಸಲಾಗಿದೆ.
ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳು, ವೈದ್ಯಕೀಯ ಅಧೀಕ್ಷಕರು, ಆಡಳಿತ ವೈದ್ಯಾಧಿಕಾರಿಗಳು (AMO) ಹಾಗೂ ಸಂಬಂಧಿತ ಅಧಿಕಾರಿಗಳು ಕೆಳಗಿನ ಸೂಚನೆಗಳನ್ನು ತಕ್ಷಣ ಜಾರಿಗೆ ತರುವುದು. ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ಅನುಸರಣೆ ಕೊರತೆ ಕಂಡು ಬಂದಲ್ಲಿ, ಅನ್ವಯಿಸುವ ಸೇವಾ ನಿಯಮಾವಳಿಗಳ ಪ್ರಕಾರ ಕ್ರಮಕೈಗೊಳ್ಳಲಾಗುವುದು.
1. ಉದರ ದರ್ಶಕ (ಟೂಬೆಕ್ಕಮಿ) ಶಿಬಿರಗಳಿಗೆ ಸ್ತ್ರೀರೋಗ ತಜ್ಞರ ನಿಯೋಜನೆ:
ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ఒబ్బ ಮಾತ್ರ ಸ್ತ್ರೀರೋಗ ತಜ್ಞರು ಕಾರ್ಯನಿರ್ವಹಿಸುತ್ತಿದ್ದರೆ, ಅವರನ್ನು ಬೇರೆ ಊರಿನ ಆಸ್ಪತ್ರೆಗೆ ಉದರದರ್ಶಕ (ಟೂಬೆಕ್ಟಮಿ) /LTO ಶಿಬಿರಗಳು ಅಥವಾ ಇತರೆ ಶಸ್ತ್ರಚಿಕಿತ್ಸಾ ಕಾರ್ಯಕ್ರಮಗಳಿಗೆ ನಿಯೋಜಿಸಬಾರದು. ಪ್ರಸ್ತುತ ಇಂತಹ ನಿಯೋಜನೆ ಜಾರಿಯಲ್ಲಿದ್ದರೆ, ಸಂಬಂಧಿತ ಆಸ್ಪತ್ರೆಯಲ್ಲಿ ಗರ್ಭಿಣಿ ಆರೈಕೆ ಹಾಗೂ ತುರ್ತು ಪ್ರಸೂತಿ ಸೇವೆಗಳನ್ನು ನಿರಂತರವಾಗಿ ಲಭ್ಯತೆಗೊಳಿಸಲು ತಕ್ಷಣದಿಂದಲೇ ಅಂತಹ ನಿಯೋಜನೆಗಳನ್ನು ರದ್ದುಗೊಳಿಸಬೇಕು. ಜಿಲ್ಲಾ ಆರೋಗ್ಯ ಅಧಿಕಾರಿಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂತಹ ವ್ಯವಸ್ಥೆಗಳ ಪರಿಶೀಲನೆ ನಡೆಸಿ ಅಗತ್ಯವಾದ ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಬೇಕು. ಕುಟುಂಬ ಯೋಜನ ಸೇವೆಗಳ ನಿರಂತರತೆಗಾಗಿ ಹಾಗೂ ಹೊರಗಿನ ಶಸ್ತ್ರ ಚಿಕಿತ್ಸಕರ ಮೇಲಿನ ಅವಲಂಬನೆ ಕಡಿಮೆ ಮಾಡಲು ತಾಲೂಕು ಆಸ್ಪತ್ರೆಗಳಲ್ಲಿ ಇರುವ ಸ್ತ್ರೀರೋಗ ತಜ್ಞರು/ಶಸ್ತ್ರಚಿಕಿತ್ಸಕರು ತಮ್ಮದೇ ಆಸ್ಪತ್ರೆಗಳಲ್ಲಿ ಲ್ಯಾಪರೋಸ್ಕೋಪಿಕ್ ಟ್ಯೂಬೆಕ್ಟಮಿ ಶಸ್ತ್ರ ಚಿಕಿತ್ಸೆ ನಡೆಸಲು ಅಗತ್ಯ ತರಬೇತಿಯನ್ನು ಹಾಗೂ ವ್ಯವಸ್ಥೆಯನ್ನು ಒದಗಿಸಲು ಸೂಕ್ತ ಕ್ರಮಕೈಗೊಳ್ಳುವುದು.
2. ತಜ್ಞ ವೈದ್ಯರ ಕೇಂದ್ರ ಸ್ಥಾನದ ವಾಸ್ತವ್ಯ:
ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ನಿಯೋಜಿಸಲ್ಪಟ್ಟ ಎಲ್ಲಾ ತಜ್ಞರು ತಮ್ಮ ನಿಗದಿತ ಕೇಂದ್ರಸ್ಥಾನದಲ್ಲಿಯೇ ಕಡ್ಡಾಯವಾಗಿ ವಾಸಿಸಬೇಕು ಮತ್ತು ದೂರದ ಸ್ಥಳಗಳಿಂದ ಸಂಚಾರ ಮಾಡಬಾರದು. ತುರ್ತು, ತಾಯಂದಿರು ಹಾಗೂ ನವಜಾತ ಶಿಶುಸೇವೆಗಳಿಗಾಗಿ 24 ಗಂಟೆಗಳ ಲಭ್ಯತೆ ಖಚಿತಪಡಿಸಲು, ಯಾವುದೇ ವಿನಾಯಿತಿ ಇಲ್ಲದೆ ಮುಖ್ಯ ಕಚೇರಿಯಲ್ಲಿ ವಾಸಿಸುವುದು ಕಡ್ಡಾಯವಾಗಿದೆ. ಅನುಸರಣೆ ಖಚಿತಪಡಿಸಲು, KAMS (ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆ) ಯನ್ನು ತಿದ್ದುಪಡಿ ಮಾಡಿ, ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ 10:00 ಗಂಟೆಗೆ ಕೇಂದ್ರಸ್ಥಾನದಿಂದ ಹಾಜರಾತಿ ಗುರುತಿಸುವುದು ಕಡ್ಡಾಯಗೊಳಿಸುವುದು. ಇದು ಕೇಂದ್ರ ಸ್ಥಾನದಲ್ಲಿ ತಜ್ಞರು ವಾಸಿಸದಿರುವ ಬಗ್ಗೆ ದೂರುಗಳು ಬಂದಿರುವ ಸಂದರ್ಭಗಳಲ್ಲಿ ಮಾತ್ರ ಕಡ್ಡಾಯಗೊಳಿಸುವುದು. ಇಂತಹ ಮೇಲ್ವಿಚಾರಣೆ ಅಗತ್ಯವಿರುವ ಪ್ರತಿಯೊಂದು ಪ್ರಕರಣಕ್ಕೂ ಸರ್ಕಾರವು ಪ್ರತ್ಯೇಕ ಆದೇಶಗಳನ್ನು ಹೊರಡಿಸುವುದು.
3. ರಕ್ತದ ಲಭ್ಯತೆ ಮತ್ತು ತುರ್ತು ಸಿದ್ಧತೆ:
ಪ್ರಸವ ಸೇವೆಗಳನ್ನು ನೀಡುವ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಅಗತ್ಯವಿರುವ ರಕ್ತ ಹಾಗೂ ರಕ್ತ ಉತ್ಪನ್ನಗಳ ನಿರಂತರ ಲಭ್ಯತೆ ಖಚಿತಪಡಿಸಬೇಕು. ಆಸ್ಪತ್ರೆಯ ರಕ್ತನಿಧಿ ಕೇಂದ್ರ ಅಥವಾ ರಕ್ತಸಂಗ್ರಹ ಘಟಕನಲ್ಲಿ ಅಗತ್ಯ ರಕ್ತಗುಂಪು ಅಥವಾ ಉತ್ಪನ್ನಗಳು ಲಭ್ಯವಿಲ್ಲದ ಸಂದರ್ಭಗಳಲ್ಲಿ ಸಂಬಂಧಿತ ಅಧಿಕಾರಿಗಳು ಜಿಲ್ಲೆಯೊಳಗೆ ಅಥವಾ ಸಮೀಪದ ಪ್ರದೇಶಗಳಲ್ಲಿ ಇರುವ ಕನಿಷ್ಠ ಎರಡು ಅಥವಾ ಮೂರು ಸರ್ಕಾರಿ ಅಥವಾ ಪರವಾನಗಿ ಪಡೆದ ಖಾಸಗಿ ರಕ್ತನಿಧಿ ಕೇಂದ್ರಗಳೊಂದಿಗೆ ಮುಂಚಿತವಾಗಿ ಅಧಿಕೃತ ಒಪ್ಪಂದಗಳನ್ನು (MoU) ಮಾಡಿರಬೇಕು. ತುರ್ತು ಸಂದರ್ಭಗಳಲ್ಲಿ ಯಾವುದೇ ವಿಳಂಬವಾಗದಂತೆ ರಕ್ತವನ್ನು ತಕ್ಷಣ ಪಡೆಯಲು ಮತ್ತು ಸಾಗಿಸಲು ಅಗತ್ಯ ವ್ಯವಸ್ಥೆಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಬೇಕು. ಇದಲ್ಲದೆ, ಪ್ರಸ್ತುತ ಟರ್ಮ್ಸ್ ಆಫ್ ರೆಫರೆನ್ಸ್ (TOR) ಮತ್ತು ಎಲ್ಲಾ ಖಾಸಗಿ ರಕ್ತಬ್ಯಾಂಕ್‌ಗಳಿಗೆ ಅನ್ವಯಿಸುವ ನಿಯಮಾವಳಿಗಳ ಪ್ರಕಾರ, ರಕ್ತದಾನ ಶಿಬಿರಗಳಲ್ಲಿ ಸಂಗ್ರಹಿಸಲಾದ ಒಟ್ಟು ರಕ್ತದ 25% ಅನ್ನು ಸರ್ಕಾರದ ರಕ್ತ ಬ್ಯಾಂಕ್‌ಗಳು ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಕಡ್ಡಾಯವಾಗಿ ಒದಗಿಸಬೇಕು. ಜಿಲ್ಲಾ ಆರೋಗ್ಯ ಅಧಿಕಾರಿಗಳು ರಕ್ತಬ್ಯಾಂಕ್‌ಗಳು ಮತ್ತು ರಕ್ತಸಂಗ್ರಹ ಘಟಕಗಳ ಮೇಲ್ವಿಚಾರಣೆ ಮತ್ತು ಕಾರ್ಯನಿರ್ವಹಣೆಯನ್ನು ಬಲಪಡಿಸಿ, ಈ ನಿಯಮಾವಳಿಗಳ ಅನುಸರಣೆಯನ್ನು ಖಚಿತಪಡಿಸಬೇಕು.
4. ARC ಪಾರ್ಟೋಗ್ರಾಫ್ ಕಡ್ಡಾಯ ಅನುಷ್ಠಾನ:
ARC ಪಾರ್ಟೋಗ್ರಾಫ್ ವ್ಯವಸ್ಥೆಯ ಬಳಕೆ ಎಲ್ಲಾ ಸರ್ಕಾರಿ ಪ್ರಸವ ಸೇವೆಗಳನ್ನು ನೀಡುವ ಆರೋಗ್ಯ ಸಂಸ್ಥೆಗಳಲ್ಲಿ ಕಡ್ಡಾಯಗೊಳಿಸಲಾಗಿದೆ. ಪ್ರತಿ ಪ್ರಸವ ಪ್ರಕರಣವನ್ನು ರಿಯಲ್-ಟೈಮ್‌ನಲ್ಲಿ ARC ಪಾರ್ಟೋಗ್ರಾಫ್ ಪ್ಲಾಟ್‌ಫಾರ್ಮ್‌ನಲ್ಲಿ ದಾಖಲಿಸಿ ನವೀಕರಿಸುವುದು ಕಡ್ಡಾಯವಾಗಿದೆ.
ಪಾರ್ಟೋಗ್ರಾಫ್‌ನ ಸರಿಯಾದ ದಾಖಲೆಗಳಿಂದ ಅಪಾಯದ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸುವುದು, ಸಮಯೋಚಿತ ಚಿಕಿತ್ಸಾ ಕ್ರಮಕೈಗೊಳ್ಳುವುದು ಹಾಗೂ ತಾಯಿ ಮತ್ತು ನವಜಾತ ಶಿಶುಗಳ ಗಂಭೀರ ಸಮಸ್ಯೆಗಳನ್ನು ತಡೆಯುವುದು ಸಾಧ್ಯವಾಗುತ್ತದೆ. ಇದು ತಾಯಿ ಮರಣ, ನಿರ್ಜೀವ ಜನನ (Still birth) ಮತ್ತು ಬದುಕುಳಿದ ತಾಯಿ (Maternal Near Miss) ಪ್ರಕರಣಗಳ ಪರಿಶೀಲನೆಗೆ ಮಹತ್ವದ ಸಾಧನವಾಗಿದೆ.
ಪಾರ್ಟೋಗ್ರಾಫ್ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ದಾಖಲಿಸದಿದ್ದಲ್ಲಿ ಅದನ್ನು ಗಂಭೀರ ನಿರ್ಲಕ್ಷ್ಯವೆಂದು ಪರಿಗಣಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಸಂಬಂಧಿತ ಆಸ್ಪತ್ರೆಯ AB-ArK ತಂಡದ ಪ್ರೋತ್ಸಾಹಧನವನ್ನು (Incentives) ತಡೆಹಿಡಿಯಲಾಗುವುದು.
ತಾಯಿ ಮರಣ, ನಿರ್ಜೀವ ಜನನ (Still birth) ಮತ್ತು ಬದುಕುಳಿದ ತಾಯಿ (Maternal Near Miss) ಪ್ರಕರಣಗಳಲ್ಲಿ ಹೊಣೆಗಾರಿಕೆ ನಿಗದಿಮಾಡುವ ಸಂದರ್ಭದಲ್ಲಿ ಪಾರ್ಟೋಗ್ರಾಫ್ ದಾಖಲೆಗಳ ಅನುಸರಣೆ ಕೂಡ ಪರಿಗಣಿಸಲಾಗುತ್ತದೆ.
ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಎಲ್ಲಾ ಆಸ್ಪತ್ರೆಯ ಮುಖ್ಯಸ್ಥರು/ಆಡಳಿತ ವೈದ್ಯಾಧಿಕಾರಿಗಳು (AMO) ಇದರ ಕಟ್ಟುನಿಟ್ಟಿನ ಅನುಸರಣೆ ಮತ್ತು ನಿಯಮಿತ ಪರಿಶೀಲನೆ ನಡೆಸಬೇಕು.
5. ಪ್ರಸವ ಕೊಠಡಿ ಮತ್ತು ಬಾಣಂತಿ ವಾರ್ಡ್ ಗೆ ಭೇಟಿ:
ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಕರ್ತವ್ಯದಲ್ಲಿರುವ ಎಲ್ಲಾ ತಜ್ಞವೈದ್ಯರು ತಮ್ಮ ಕರ್ತವ್ಯ ಅವಧಿಯಲ್ಲಿ ಪ್ರಸವ ಕೊಠಡಿ ಹಾಗೂ ಬಾಣಂತಿ ವಾರ್ಡ್ ಭೇಟಿ ನೀಡುವುದು ಕಡ್ಡಾಯವಾಗಿದೆ. ಅವರು ಮಾಡಿದ ಭೇಟಿ ಮತ್ತು ವಿವರಗಳನ್ನು ಈ ಉದ್ದೇಶಕ್ಕಾಗಿ ನಿರ್ವಹಿಸಲಾಗುವ ನೋಂದಣಿ ( Register/ case sheet) ಗಳಲ್ಲಿ ದಾಖಲಿಸಬೇಕು.
ಅಗತ್ಯವಿದ್ದಲ್ಲಿ ಕರ್ತವ್ಯದಲ್ಲಿರುವ ವೈದ್ಯರು ಆಸ್ಪತ್ರೆಯ ಸ್ತ್ರೀರೋಗ ತಜ್ಞರೊಡನೆ ತಕ್ಷಣ ಸಮಾಲೋಚನೆ ನಡೆಸಬೇಕು.
ಯಾವುದೇ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರ ಹುದ್ದೆ ಖಾಲಿ ಇದ್ದಲ್ಲಿ, ಕರ್ತವ್ಯದಲ್ಲಿರುವ ವೈದ್ಯರು ಸಂಬಂಧಿತ ಜಿಲ್ಲಾ ಆಸ್ಪತ್ರೆ/ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯ ಕರ್ತವ್ಯನಿರತ ಸ್ತ್ರೀರೋಗ ತಜ್ಞರೊಂದಿಗೆ ತಕ್ಷಣ ಸಂಪರ್ಕಿಸಿ ತಜ್ಞ ಸಲಹೆ ಪಡೆಯಬೇಕು.
ಎಲ್ಲಾ ಆಸ್ಪತ್ರೆಯ ಮುಖ್ಯಸ್ಥರು/ ಆಡಳಿತ ವೈದ್ಯಾಧಿಕಾರಿಗಳು (AMO) ಇದರ ಕಟ್ಟುನಿಟ್ಟಿನ ಅನುಸರಣೆ ಹಾಗೂ ನಿಯಮಿತ ಪರಿಶೀಲನೆ ನಡೆಸಬೇಕು.

