ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ನಾನ್ ಎಸಿ ಸ್ಲೀಪರ್ ಬಸ್ ಪರಿಚಯಿಸಿದೆ. ‘ಪಲ್ಲಕ್ಕಿ’ ಹೆಸರಿನ ಬಸ್ ಈಗಾಗಲೇ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸಂಚಾರವನ್ನು ನಡೆಸುತ್ತಿದೆ. ಈಗ ಈ ಬಸ್ ಪಕ್ಕದ ರಾಜ್ಯವಾದ ಕೇರಳಕ್ಕೆ ಸಹ ಸಂಪರ್ಕವನ್ನು ಕಲ್ಪಿಸುತ್ತದೆ.
ಕೆಎಸ್ಆರ್‌ಟಿಸಿ ಇತ್ತೀಚೆಗೆ ‘ಪಲ್ಲಕ್ಕಿ’ ಮಾದರಿಯ 70 ಹೊಸ ಬಸ್‌ಗಳನ್ನು ಲೋಕಾರ್ಪಣೆ ಮಾಡಿದೆ. ಇವು ಕೇರಳದ ಹಲವು ಪ್ರಮುಖ ನಗರಗಳಿಗೂ ಸಂಚರಿಸಲಿವೆ. ಕೋಝಿಕ್ಕೋಡ್, ಮುನ್ನಾರ್, ಕೊಟ್ಟಾಯಂ ಮತ್ತು ಎರ್ನಾಕುಲಂ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಈ ಹೊಸ ಬಸ್‌ಗಳ ಸೇವೆ ಮಾರ್ಚ್ ಅಂತ್ಯದ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ.
ಈ ಪಲ್ಲಕ್ಕಿ ಬಸ್‌ಗಳು ಎಸಿ-ರಹಿತ ಸ್ಲೀಪರ್ ಆಗಿದ್ದು, ಆಧುನಿಕ ಲೈಟಿಂಗ್ ವ್ಯವಸ್ಥೆ, ವಿಶಾಲವಾದ ಲಗೇಜ್ ಜಾಗ, ಸುರಕ್ಷತಾ ಸೌಲಭ್ಯಗಳು ಮತ್ತು ಆರಾಮದಾಯಕ ಒಳಾಂಗಣವನ್ನು ಹೊಂದಿವೆ. ಕರ್ನಾಟಕದ ಮಹಿಳೆಯರಿಗೆ ಈ ಬಸ್‌ಗಳಲ್ಲಿ ‘ಶಕ್ತಿ’ ಯೋಜನೆಯಡಿ ಉಚಿತ ಪ್ರಯಾಣದ ಸೌಲಭ್ಯವೂ ಲಭ್ಯವಿದೆ.
ಬೆಂಗಳೂರಿನಿಂದ 500 ಕಿ.ಮೀ ಗಿಂತ ಹೆಚ್ಚು ದೂರವಿರುವ ನಗರಗಳಿಗೆ ಈ ಮಾದರಿ ಬಸ್‌ಗಳು ಸಂಚರಿಸಲಿದ್ದು, ಮಂಗಳೂರು, ಮೈಸೂರು, ಆಗುಂಬೆ, ಚಿಕ್ಕಮಗಳೂರು, ಹಂಪಿ, ಪುತ್ತೂರು, ಕುಕ್ಕೆ ಸುಬ್ರಹ್ಮಣ್ಯ, ಜಮಖಂಡಿ ಮುಂತಾದ ಸ್ಥಳಗಳಿಗೂ ಇವುಗಳ ಸೇವೆ ಲಭ್ಯವಿದೆ.
ಪಲ್ಲಕ್ಕಿ ಬಸ್‌ಗಳ ಜೊತೆಗೆ 45 ಕರ್ನಾಟಕ ಸಾರಿಗೆ ಬಸ್‌ಗಳನ್ನೂ ಸಹ ಲೋಕಾರ್ಪಣೆಗೊಳಿಸಲಾಗಿದೆ. ಈ ವರ್ಷದ ಜೂನ್ ವೇಳೆಗೆ ಸುಮಾರು 805 ಹೊಸ ಕರ್ನಾಟಕ ಸಾರಿಗೆ ಬಸ್‌ಗಳನ್ನು ರಸ್ತೆಗಿಳಿಸಲು ಅಧಿಕಾರಿಗಳು ಯೋಜಿಸಿದ್ದಾರೆ.
ಕೆಂಪು ಮತ್ತು ಬಿಳಿ ಬಣ್ಣದ ತ್ರೀ-ಪ್ಲಸ್-ಟೂ ಆಸನ ವಿನ್ಯಾಸದ ಈ ಬಸ್‌ಗಳು ಆರಾಮದಾಯಕ ಮತ್ತು ಕೈಗೆಟುಕುವ ದರದಲ್ಲಿದ್ದು, ತಮ್ಮ ನವೀಕೃತ ವಿನ್ಯಾಸ ಮತ್ತು ಆಧುನಿಕ ಸುರಕ್ಷತಾ ಸೌಲಭ್ಯಗಳಿಗೆ ಹೆಸರುವಾಸಿಯಾಗಿವೆ.
ಬಸ್ ಸೇವೆ ಮತ್ತೆ ಆರಂಭ: ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಸ್ಥಗಿತಗೊಂಡಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರು-ಬತ್ತೇರಿ ವಾರಾಂತ್ಯದ ವಿಶೇಷ ಸೂಪರ್‌ಫಾಸ್ಟ್ ಬಸ್ ಸೇವೆ ಮಾರ್ಚ್ 16ರಿಂದ ಪುನರಾರಂಭಗೊಂಡಿದೆ.
- ಬೆಂಗಳೂರಿನಿಂದ ಪ್ರತಿ ಸೋಮವಾರ ಬೆಳಿಗ್ಗೆ 09:02ಕ್ಕೆ ಬೆಂಗಳೂರು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಹೊರಡುವ ಬಸ್, ಮಧ್ಯಾಹ್ನ 12:07ಕ್ಕೆ ಮೈಸೂರು ತಲುಪುತ್ತದೆ. ನಂತರ ಗುಂಡ್ಲುಪೇಟೆ ಮತ್ತು ಮುತ್ತಂಗ ಮಾರ್ಗವಾಗಿ ಮಧ್ಯಾಹ್ನ 3:22ಕ್ಕೆ ಬತ್ತೇರಿ ತಲುಪಲಿದೆ.
- ಬತ್ತೇರಿಯಿಂದ ಪ್ರತಿ ಭಾನುವಾರ ರಾತ್ರಿ 9:30ಕ್ಕೆ ಬತ್ತೇರಿಯಿಂದ ಹೊರಡುವ ಬಸ್, ರಾತ್ರಿ 9:50ಕ್ಕೆ ಕೊನಿಚಿರಾ, 10:00 ಗಂಟೆಗೆ ನಡವಯಲ್, 10:10ಕ್ಕೆ ಪನಾಮರಂ, 10:40ಕ್ಕೆ ಮಾನಂದವಾಡಿ ಮತ್ತು ಮುಂಜಾನೆ 2:40ಕ್ಕೆ ಮೈಸೂರು ತಲುಪುತ್ತದೆ. ಅಂತಿಮವಾಗಿ ಬೆಳಿಗ್ಗೆ 5:20ಕ್ಕೆ ಬೆಂಗಳೂರನ್ನು ತಲುಪಲಿದೆ.
ಈ ಬಸ್ಸಿನ ಪ್ರಯಾಣ ದರ 472 ರೂ. ಗಳಾಗಿವೆ. ಪ್ರಯಾಣದ ಆರಂಭದಿಂದ ಅಂತ್ಯದವರೆಗೆ (End-to-end) ಟಿಕೆಟ್ ಪಡೆಯುವ ವ್ಯವಸ್ಥೆ ಇದ್ದರೂ, ಕೊನಿಚಿರಾ, ನಡವಯಲ್ ಮತ್ತು ಪನಾಮರಂನಿಂದ ಮುಂಗಡ ಕಾಯ್ದಿರಿಸುವಿಕೆ (Reservation) ಸೌಲಭ್ಯವನ್ನು ಕಲ್ಪಿಸಲಾಗಿದೆ.

