ಬೆಂಗಳೂರಿನಲ್ಲಿ ವಿದೇಶಿ ಮಾದರಿ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಯಾಗಲಿದೆ. ಆ್ಯಪ್ ನಲ್ಲೇ ಬುಕ್ ಮಾಡಿ ಅಲ್ಲೇ ಹಣ ಪಾವತಿಸಬೇಕು. ಇಲ್ಲದಿದ್ದರೆ ವಾಹನಗಳನ್ನು ಜಪ್ತಿ ಮಾಡಲಾಗುವುದು.
ಪೇ ಪಾರ್ಕಿಂಗ್ ನಲ್ಲಿ ಗಂಟೆಗೆ ಬೈಕ್ ಗೆ 30 ರೂ., ಕಾರ್ ಗೆ 50 ರೂ. ಶುಲ್ಕ ನಿಗದಿಪಡಿಸಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಸದ್ದಿಲ್ಲದೆ ಶುಲ್ಕದ ಬರೆ ಎಳೆಯಲು ಸಿದ್ಧತೆ ನಡೆಸಿದೆ. ವಿದೇಶದ ಮಾದರಿಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ರಸ್ತೆಗಳಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಮುಂದಾಗಿದೆ. ನಿಗದಿತ ಸ್ಥಳಗಳಲ್ಲಿ ಮಾತ್ರ ವಾಹನ ನಿಲ್ಲಿಸಬೇಕು. ಇದಕ್ಕೆ ಗಂಟೆಗಳ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕ ಪಾವತಿಸಬೇಕು.
ಮೊದಲ ಹಂತದಲ್ಲಿ ಜಯನಗರ, ಹೆಚ್ಎಸ್ಆರ್ ಲೇಔಟ್, ಕೋರಮಂಗಲ, ಕಬ್ಬನ್ ಪಾರ್ಕ್ ಮೊದಲಾದ ಕಡೆಗಳಲ್ಲಿ ಈ ವ್ಯವಸ್ಥೆ ಜಾರಿ ಆಗಲಿದೆ. ನಿಯಮ ಉಲ್ಲಂಘಿಸಿದರೆ ಟೋಯಿಂಗ್ ಜೊತೆಗೆ ಹೆಚ್ಚುವರಿ ದಂಡ ಬೀಳಲಿದೆ. ಈ ಪಾರ್ಕಿಂಗ್ ನಿರ್ವಹಣೆ ಗುತ್ತಿಗೆ ಚೆನ್ನೈ ಮೂಲದ ಖಾಸಗಿ ಕಂಪನಿ ಪಾಲಾಗಿದ್ದು, ವ್ಯವಸ್ಥೆ ಜಾರಿಗೆ ಸಂಬಂಧಿಸಿದಂತೆ ಸಂಚಾರ ವಿಭಾಗದ ಪೊಲೀಸರೊಂದಿಗೆ ಜಿಬಿಎ ಸಭೆ ನಡೆಸಿದೆ. ಪೇ ಪಾರ್ಕಿಂಗ್ ವ್ಯವಸ್ಥೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ನಿರ್ವಹಣೆಯಾಗಲಿದ್ದು, ಇದಕ್ಕೆ ಅಪ್ಲಿಕೇಶನ್ ಅನ್ನು ಖಾಸಗಿ ಕಂಪನಿ ಅಭಿವೃದ್ಧಿಪಡಿಸಿದೆ. ಆ್ಯಪ್ ನಲ್ಲಿ ಎಲ್ಲೆಲ್ಲಿ ವಾಹನ ನಿಲ್ಲಿಸಬಹುದು ಎನ್ನುವ ಮಾಹಿತಿ ಸಿಗಲಿದ್ದು, ಆ ಸ್ಥಳಗಳಲ್ಲಿ ವಾಹನ ನಿಲ್ಲಿಸಬೇಕು. ಬೇರೆ ಕಡೆ ನಿಲ್ಲಿಸಿದರೆ ಟೋಯಿಂಗ್ ಸಿಬ್ಬಂದಿಗೆ ಸಂದೇಶ ರವಾನೆಯಾಗಲಿದ್ದು, ಆ ವಾಹನವನ್ನು ಟೋಯಿಂಗ್ ಮಾಡಲಾಗುವುದು ಎನ್ನಲಾಗಿದೆ.
ಚಿತ್ರಕೃಪೆ: ಎಐ

