ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಬುಧವಾರದಂದು LPG ರೀಫಿಲ್ ಬುಕಿಂಗ್ ಸಮಯ ಬದಲಾಗಿದೆ ಎಂಬ ವರದಿಗಳು ಸುಳ್ಳು ಎಂದು ಸ್ಪಷ್ಟಪಡಿಸಿದೆ. ಪ್ರಸ್ತುತ ಇರುವ ನಿಯಮಗಳೇ ಮುಂದುವರಿಯಲಿವೆ ಎಂದು ಸರ್ಕಾರ ತಿಳಿಸಿದೆ.. ಸೋಶಿಯಲ್ ಮೀಡಿಯಾ ಮತ್ತು ಕೆಲವು ಸುದ್ಧಿ ಸಂಸ್ಥೆಗಳಲ್ಲಿ LPG ರೀಫಿಲ್ ಬುಕಿಂಗ್ ಸಮಯ ಬದಲಾಗಿದೆ ಎಂಬ ಸುಳ್ಳು ಸುದ್ದಿ ಹರಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಸುಳ್ಳುಸುದ್ದಿ : PMUY (ಉಜ್ವಲ) ಸಂಪರ್ಕಕ್ಕೆ 45 ದಿನಗಳು, ಸಾಮಾನ್ಯ ಸಿಂಗಲ್ ಸಿಲಿಂಡರ್ ಅಥವಾ ಡಬಲ್ ಸಿಲಿಂಡರ್ ಸಂಪರ್ಕಗಳಿಗೆ 25 ರಿಂದ 35 ದಿನಗಳ ಮಿತಿ ಎಂದು ಹರಡಲಾಗಿತ್ತು.
ಸತ್ಯಾಂಶ: ಸರ್ಕಾರ ಇಂತಹ ಯಾವುದೇ ಬದಲಾವಣೆ ಮಾಡಿಲ್ಲ. ನಗರ ಪ್ರದೇಶಗಳಲ್ಲಿ 25 ದಿನಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳು – ಇದು ಯಾವುದೇ ರೀತಿಯ ಕನೆಕ್ಷನ್ ಆಗಿದ್ದರೂ ಅನ್ವಯಿಸುತ್ತದೆ ಎಂದು ತಿಳಿಸಿದೆ.
ಇಂಧನ ಪೂರೈಕೆಯ ಬಗ್ಗೆ ಭರವಸೆ
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು LPG ಸಾಕಷ್ಟು ದಾಸ್ತಾನು ಇದೆ ಎಂದು ಸಚಿವಾಲಯ ತಿಳಿಸಿದೆ. ಜನರು ಇಂತಹ ತಪ್ಪು ಮಾಹಿತಿಯನ್ನು ನಂಬಬಾರದು ಅಥವಾ ಹರಡಬಾರದು ಮತ್ತು ಅನಗತ್ಯವಾಗಿ ‘ಪ್ಯಾನಿಕ್ ಬುಕಿಂಗ್’ (ಹೆದರಿಕೆಯಿಂದ ಮುಂಗಡ ಬುಕಿಂಗ್) ಮಾಡಬಾರದು ಎಂದು ಮನವಿ ಮಾಡಿದೆ.
ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ಮಾತನಾಡಿ, “ಎಲ್ಲಾ ರಿಫೈನರಿಗಳು ಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತಿವೆ. ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಿಲ್ಲ. LPG ದೇಶೀಯ ಉತ್ಪಾದನೆಯನ್ನು ಕೂಡ ಹೆಚ್ಚಿಸಲಾಗಿದೆ” ಎಂದು ತಿಳಿಸಿದ್ದಾರೆ.
ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಗೆ ಒತ್ತು
ಪೈಪ್‌ಲೈನ್ ಮೂಲಕ ಅನಿಲ ಸಂಪರ್ಕ (PNG) ನೀಡುವ ಪ್ರಕ್ರಿಯೆಯನ್ನು ವೇಗಗೊಳಿಸಲು ಪೆಟ್ರೋಲಿಯಂ ನಿಯಂತ್ರಣ ಮಂಡಳಿ (PNGRB) ನಿರ್ದೇಶನ ನೀಡಿದೆ. ಪೈಪ್‌ಲೈನ್ ಲಭ್ಯವಿರುವ ಕಡೆಗಳಲ್ಲಿ ಶಾಲೆಗಳು, ಕಾಲೇಜುಗಳು, ಹಾಸ್ಟೆಲ್‌ಗಳು ಮತ್ತು ಅಂಗನವಾಡಿಗಳಿಗೆ ಕೇವಲ 5 ದಿನಗಳಲ್ಲಿ ಸಂಪರ್ಕ ನೀಡಲು ಸೂಚಿಸಲಾಗಿದೆ.
ಕಟ್ಟುನಿಟ್ಟಿನ ಕ್ರಮಗಳು
ಮಾರುಕಟ್ಟೆಯಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಯಲು ಮತ್ತು ಸ್ಥಿರತೆಯನ್ನು ಕಾಪಾಡಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ:ಸುಮಾರು 32 ರಾಜ್ಯಗಳಲ್ಲಿ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದೆ.ಅಕ್ರಮ ಚಟುವಟಿಕೆಗಳ ವಿರುದ್ಧ ಸುಮಾರು 3,400 ದಾಳಿಗಳನ್ನು ನಡೆಸಲಾಗಿದ್ದು, 1,000 ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ಇದುವರೆಗೆ 642 FIR ದಾಖಲಿಸಲಾಗಿದ್ದು, 155 ಜನರನ್ನು ಬಂಧಿಸಲಾಗಿದೆ. ಸುಮಾರು 250 ವಿತರಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ಕೆಲವರನ್ನು ಅಮಾನತುಗೊಳಿಸಲಾಗಿದೆ.

