ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಿಗೆ ಆಂಡ್ರೆ ರಸೆಲ್ ಕೇವಲ ಒಬ್ಬ ಆಟಗಾರನಲ್ಲ, ಅವರೊಬ್ಬ ಅಪ್ಪಟ ಮ್ಯಾಚ್ ವಿನ್ನರ್. ಇದೀಗ ಐಪಿಎಲ್ 2026ರ ಸೀಸನ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಕೆಕೆಆರ್ ಫ್ರಾಂಚೈಸಿ ತನ್ನ ನೆಚ್ಚಿನ ಆಟಗಾರನಿಗೆ ವಿಶೇಷ ಗೌರವ ನೀಡಿದೆ. ರಸೆಲ್ ಅವರು ಧರಿಸುತ್ತಿದ್ದ 12ನೇ ನಂಬರ್ ಜೆರ್ಸಿಯನ್ನು ನಿವೃತ್ತಿಗೊಳಿಸುವುದಾಗಿ ತಂಡ ಘೋಷಿಸಿದೆ. ಈ ಮೂಲಕ ಕೆಕೆಆರ್ ಇತಿಹಾಸದಲ್ಲಿ ಜೆರ್ಸಿ ನಿವೃತ್ತಿಯ ಗೌರವ ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರಸೆಲ್ ಪಾತ್ರರಾಗಿದ್ದಾರೆ.
ಕೆಕೆಆರ್ ಮತ್ತು ರಸೆಲ್ ನಡುವಿನ 11 ವರ್ಷಗಳ ಬಾಂಧವ್ಯ ವೆಸ್ಟ್ ಇಂಡೀಸ್‌ನ ಈ ದೈತ್ಯ ಆಲ್‌ರೌಂಡರ್ 2014 ರಿಂದ 2025 ರವರೆಗೆ ಕೋಲ್ಕತ್ತಾ ತಂಡದ ಅವಿಭಾಜ್ಯ ಅಂಗವಾಗಿದ್ದರು. ಈ ಸುದೀರ್ಘ ಪಯಣದಲ್ಲಿ ಅವರು ತಂಡದ ಪರವಾಗಿ ಒಟ್ಟು 133 ಪಂದ್ಯಗಳನ್ನು ಆಡಿದ್ದು, ಬರೋಬ್ಬರಿ 175ರ ಸ್ಟ್ರೈಕ್ ರೇಟ್‌ನಲ್ಲಿ 2,593 ರನ್ ಸಿಡಿಸಿದ್ದಾರೆ. ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್‌ನಲ್ಲೂ ಮಿಂಚಿರುವ ಅವರು ತಂಡಕ್ಕಾಗಿ 122 ವಿಕೆಟ್ ಕಬಳಿಸಿದ್ದಾರೆ. 2014 ಮತ್ತು 2024ರಲ್ಲಿ ಕೆಕೆಆರ್ ಐಪಿಎಲ್ ಟ್ರೋಫಿ ಗೆಲ್ಲುವಲ್ಲಿ ರಸೆಲ್ ಪಾತ್ರ ದೊಡ್ಡದಿದೆ.
ಐಪಿಎಲ್‌ನ ಮೊದಲ ಪವರ್ ಕೋಚ್ ಆಗಿ ರಸೆಲ್ ಆಟಗಾರನಾಗಿ ನಿವೃತ್ತಿ ಘೋಷಿಸಿರುವ ಆಂಡ್ರೆ ರಸೆಲ್ ಅವರನ್ನು ಕೆಕೆಆರ್ ಫ್ರಾಂಚೈಸಿ ಕೈಬಿಟ್ಟಿಲ್ಲ. ಬದಲಾಗಿ ಅವರನ್ನು ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಪವರ್ ಕೋಚ್ ಎಂಬ ಹೊಸ ಜವಾಬ್ದಾರಿಗೆ ನೇಮಕ ಮಾಡಲಾಗಿದೆ. ತಂಡದ ಮಾಲೀಕ ಶಾರುಖ್ ಖಾನ್ ಅವರು ರಸೆಲ್ ಅವರ ಅನುಭವ ಮತ್ತು ಶಕ್ತಿಯನ್ನು ಯುವ ಆಟಗಾರರಿಗೆ ಧಾರೆ ಎರೆಯಲು ಈ ನಿರ್ಧಾರ ಕೈಗೊಂಡಿದ್ದಾರೆ.
ಹೊಸ ಜವಾಬ್ದಾರಿ ಬಗ್ಗೆ ರಸೆಲ್ ಮಾತು ತಮ್ಮ ಹೊಸ ಪಾತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಆಂಡ್ರೆ ರಸೆಲ್, ಇದು ನನ್ನ ಮಾನಸಿಕ ಸ್ಥಿತಿಯ ಮೇಲೆ ಯಾವುದೇ ಪರಿಣಾಮ ಬೀರದು. ಇಷ್ಟು ವರ್ಷ ನಾನು ಕಲಿತ ವಿದ್ಯೆಯನ್ನು ಮತ್ತು ಅನುಭವವನ್ನು ನನ್ನ ತಂಡದ ಆಟಗಾರರಿಗೆ ಮರಳಿ ನೀಡುವ ಸಮಯ ಬಂದಿದೆ. ಈ ಹೊಸ ಜವಾಬ್ದಾರಿ ನನಗೆ ತುಂಬಾ ಸಂತೋಷ ತಂದಿದೆ ಎಂದು ಹೇಳಿದ್ದಾರೆ. ಮಾರ್ಚ್ 28 ರಿಂದ ಹೊಸ ಐಪಿಎಲ್ ಸೀಸನ್ ಆರಂಭವಾಗಲಿದ್ದು, ಮೈದಾನದಲ್ಲಿ ರಸೆಲ್ ಆಟಗಾರನ ಬದಲು ತರಬೇತುದಾರನಾಗಿ ಕಾಣಿಸಿಕೊಳ್ಳಲಿದ್ದಾರೆ.

