ಬೆಂಗಳೂರು : ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬರಿಗೆ ದೈಹಿಕವಾಗಿ ಬಳಸಿ ವಂಚಿಸಿದ ಆರೋಪದ ಮೇಲೆ ತಮಿಳುನಾಡು ಮೂಲದ ವ್ಯಕ್ತಿಯನ್ನು ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಜೀವನ್ ವಾಸುದೇವ್ (31) ಎಂದು ಗುರುತಿಸಲಾಗಿದೆ. ಈತ ನಗರದ ಹೊಸೂರು ರಸ್ತೆಯಲ್ಲಿ ‘ಜಾಮ್’ ಹೆಸರಿನ ಡಾನ್ಸ್ ಸ್ಟುಡಿಯೋ ಹಾಗೂ ಹೌಸ್ ಕೀಪಿಂಗ್ ಸಂಸ್ಥೆಯನ್ನು ನಡೆಸುತ್ತಿದ್ದನು.
ಘಟನೆಯ ಹಿನ್ನೆಲೆ:
ಹುಳಿಮಾವು ನಿವಾಸಿಯಾದ 24 ವರ್ಷದ ಯುವತಿಗೆ ಆರೋಪಿ ಜೀವನ್ 2018 ರಿಂದ ಪರಿಚಿತನಾಗಿದ್ದನು. 2025ರ ಜೂನ್ ತಿಂಗಳಲ್ಲಿ ಆಕೆಗೆ ಪ್ರೇಮ ನಿವೇದನೆ ಮಾಡಿದ್ದ ಆರೋಪಿ, ಮದುವೆಯಾಗುವುದಾಗಿ ನಂಬಿಸಿದ್ದನು. ಇದನ್ನು ನಂಬಿದ ಯುವತಿ ತನ್ನ ತಾಯಿಯನ್ನೂ ಮದುವೆಗೆ ಒಪ್ಪಿಸಿದ್ದರು. ಇದಾದ ನಂತರ ಆರೋಪಿಯು ಯುವತಿಯನ್ನು ಸರ್ವಿಸ್ ಅಪಾರ್ಟ್‌ಮೆಂಟ್ ಮತ್ತು ಹೋಟೆಲ್‌ಗಳಿಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದನು.
ಬೆದರಿಕೆ ಮತ್ತು ವಂಚನೆ:
ಕೆಲ ದಿನಗಳ ನಂತರ ಸಂತ್ರಸ್ತೆ ಮದುವೆಯಾಗುವಂತೆ ಒತ್ತಾಯಿಸಿದಾಗ, ಆರೋಪಿಯು ತನ್ನ ಅಸಲಿ ರೂಪ ತೋರಿಸಿದ್ದಾನೆ. “ನಿನಗೆ ಮದುವೆಯಾಗುವುದಿಲ್ಲ, ನೀನು ನನಗೆ ದೈಹಿಕ ತೃಪ್ತಿ ನೀಡುತ್ತಿಲ್ಲ” ಎಂದು ಹೇಳಿದ್ದಲ್ಲದೆ, ಆಕೆಯ ನಡತೆಯ ಬಗ್ಗೆ ಇಲ್ಲಸಲ್ಲದ ಶಂಕೆ ವ್ಯಕ್ತಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಷ್ಟೇ ಅಲ್ಲದೆ, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಜೀವಬೆದರಿಕೆ ಹಾಕಿದ್ದನು.
ತನಿಖೆಯಲ್ಲಿ ಬಯಲಾದ ಶಾಕಿಂಗ್ ಸತ್ಯ
ಸಂತ್ರಸ್ತೆ ನೀಡಿದ ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈತ ಕೇವಲ ಈ ಯುವತಿಗೆ ಮಾತ್ರವಲ್ಲದೆ, ಇದೇ ರೀತಿ ಮದುವೆಯ ಆಮಿಷವೊಡ್ಡಿ ಸುಮಾರು ಐದಾರು ಮಂದಿ ಯುವತಿಯರಿಗೆ ದೈಹಿಕವಾಗಿ ಬಳಸಿ ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಪ್ಪನ ಅಗ್ರಹಾರ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

