HomeKarnatakaದಾವಣಗೆರೆ ಟಿಕೆಟ್ ಬಿಟ್ಟುಕೊಟ್ಟ ಮುಸ್ಲಿಮರು: ಕಾಂಗ್ರೆಸ್‌ಗೆ 4 ಷರತ್ತುಗಳು!

ದಾವಣಗೆರೆ ಟಿಕೆಟ್ ಬಿಟ್ಟುಕೊಟ್ಟ ಮುಸ್ಲಿಮರು: ಕಾಂಗ್ರೆಸ್‌ಗೆ 4 ಷರತ್ತುಗಳು!

ಕಗ್ಗಂಟಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ನಾಯಕರ ಪ್ರವೇಶವಾಗಿದೆ. ಅಂತಿಮವಾಗಿ ಸಮರ್ಥ ಶಾಮನೂರು ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು, ಏಪ್ರಿಲ್ 9ರಂದು ನಡೆಯುವ ಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಮತ್ತು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪುತ್ರ ಸಮರ್ಥ ಶಾಮನೂರು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಶಾಮನೂರು ಶಿವಶಂಕರಪ್ಪ ಮೊಮ್ಮಗನಿಗೆ ಟಿಕೆಟ್ ಬೇಡ, ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿ ಎಂದು ಬೇಡಿಕೆ ಇಡಲಾಗಿತ್ತು.

ಸಚಿವ ಜಮೀರ್ ಅಹ್ಮದ್ ಖಾನ್, ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸರಣಿ ಸಭೆಗಳನ್ನು ನಡೆಸಿ, ಸಮುದಾಯಕ್ಕೆ ಭರವಸೆ ನೀಡಿ, ಸಮರ್ಥ ಶಾಮನೂರು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಸ್.ಎಸ್.ಮಲ್ಲಿಕಾರ್ಜುನ ಅವರ ಹಠ ಗೆದ್ದಿದೆ. ಆದರೆ ಈಗ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುಸ್ಲಿಮರ ಬೆಂಬಲ ಸಿಗಲಿದೆಯೇ? ಎಂಬುದು ಚರ್ಚೆಯ ವಿಚಾರವಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿರುವ ಸಾದಿಕ್ ಪೈಲ್ವಾನ್ ನಾಮಪತ್ರ ವಾಪಸ್ ಪಡೆಯುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕರ ತಲೆ ನೋವು ಹೆಚ್ಚಿಸಿದ್ದಾರೆ. ನಾಮಪತ್ರ ವಾಪಸ್ ಪಡೆಯಲು ಮಾರ್ಚ್ 26 ಕೊನೆಯ ದಿನವಾಗಿದೆ.

ಸಚಿವ ಜಮೀರ್ ಅಹ್ಮದ್‌ ಖಾನ್, ರಹೀಂ ಖಾನ್, ಶಾಸಕ ರಿಜ್ವಾನ್ ಅರ್ಷದ್, ಎನ್.ಎ. ಹ್ಯಾರಿಸ್, ನಸೀರ್ ಅಹಮದ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್, ಸಚಿವ ರಹೀಂ ಖಾನ್ ಮುಂತಾದವರು ಮುಸ್ಲಿಂ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡುವ ಷರತ್ತಿನ ಮೇಲೆ ಸಮರ್ಥ ಶಾಮನೂರು ಅಭ್ಯರ್ಥಿಯಾಗಲು ಒಪ್ಪಿದ್ದಾರೆ ಎಂಬ ಮಾಹಿತಿ ಇದೆ.

ಮುಸ್ಲಿಂ ಸಮುದಾಯದ 4 ಷರತ್ತುಗಳು

  • ಜೂನ್ ತಿಂಗಳಲ್ಲಿ ಸುಮಾರು 12 ವಿಧಾನ ಪರಿಷತ್ ಸದಸ್ಯರು ನಿವೃತ್ತರಾಗುತ್ತಿದ್ದು, ಆ ಸ್ಥಾನ ಭರ್ತಿ ಮಾಡುವಾಗ ಮುಸ್ಲಿಂ ಸಮುದಾಯದ ನಾಯಕರಿಗೆ ಆದ್ಯತೆ ನೀಡಬೇಕು.
  • ಮುಂಬರುವ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕರಿಗೆ ಅವಕಾಶ ನೀಡಬೇಕು.
  • ನಿಗಮ/ ಮಂಡಳಿಗಳ ನೇಮಕಾತಿಯಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು.
  • ಮುಂದಿನ ಸಚಿವ ಸಂಪುಟ ಪುನಾರಚನೆ ವೇಳೆ ಮುಸ್ಲಿಮರಿಗೆ ಹೆಚ್ಚಿನ ಸಚಿವ ಸ್ಥಾನ ನೀಡಬೇಕು.

ಮಾಹಿತಿಗಳ ಪ್ರಕಾರ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮತಗಳು ಸುಮಾರು 80 ಸಾವಿರ. ಅಭ್ಯರ್ಥಿ ಗೆಲುವಿನಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ. ಶಾಮನೂರು ಕುಟುಂಬಕ್ಕೆ ಮುಸ್ಲಿಮರು ಬೆಂಬಲ ನೀಡದಿದ್ದರೆ ಉಪ ಚುನಾವಣೆ ಫಲಿತಾಂಶ ಬೇರೆಯೇ ಆಗಲಿದೆ.

ಸಮರ್ಥ ಶಾಮನೂರು ಮತ್ತು ಬಿಜೆಪಿಯ ಶ್ರೀನಿವಾಸ್‌ ದಾಸಕರಿಯಪ್ಪ ನಡುವೆ ತೀವ್ರ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ಚುನಾವಣಾ ಫಲಿತಾಂಶಕ್ಕಾಗಿ ಜನರು ಮೇ 4ರ ತನಕ ಕಾಯಬೇಕಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular