HomeLatest Newsಗರ್ಭಿಣಿಗೆ 'ವರ್ಕ್ ಫ್ರಮ್ ಹೋಮ್' ನಿರಾಕರಣೆ : ಕಂಪನಿಗೆ ಬಿತ್ತು ₹210 ಕೋಟಿ ದಂಡ !

ಗರ್ಭಿಣಿಗೆ ‘ವರ್ಕ್ ಫ್ರಮ್ ಹೋಮ್’ ನಿರಾಕರಣೆ : ಕಂಪನಿಗೆ ಬಿತ್ತು ₹210 ಕೋಟಿ ದಂಡ !

ಒಂದೆಡೆ ಹುಟ್ಟಲಿರುವ ಮಗುವಿನ ಪ್ರಾಣ, ಇನ್ನೊಂದೆಡೆ ಆಫೀಸಿನ ಕಠಿಣ ನಿಯಮಗಳು. ವೈದ್ಯರು ಬೆಡ್ ರೆಸ್ಟ್ ಅನಿವಾರ್ಯ ಎಂದು ಹೇಳುತ್ತಿದ್ದರೂ, ಆ ಕಾರ್ಪೊರೇಟ್ ಸಂಸ್ಥೆ ಮಾತ್ರ ಕನಿಕರ ತೋರಿಸಲಿಲ್ಲ. “ಮನೆಯಿಂದ ಕೆಲಸ ಮಾಡುತ್ತೇನೆ” ಎಂದು ಬೇಡಿಕೊಂಡರೂ, “ಆಫೀಸಿಗೆ ಬರಲೇಬೇಕು” ಎಂದು ಫರ್ಮಾನು ಹೊರಡಿಸಿತು. ಆ ಹಠಮಾರಿತನವೇ ಕೊನೆಗೆ ಒಂದು ಪಸಿಪ್ರಾಣವನ್ನು ಬಲಿಪಡೆದಿದೆ. ತನ್ನ ಕಣ್ಣೆದುರೇ ಮಗುವನ್ನು ಕಳೆದುಕೊಂಡ ತಾಯಿಯ ಆಕ್ರಂದನಕ್ಕೆ ಅಮೆರಿಕಾ ಕೋರ್ಟ್ ಇದೀಗ ಅಕ್ಷರಶಃ ₹210 ಕೋಟಿ ಪರಿಹಾರದ ತೀರ್ಪು ನೀಡಿದೆ.

ಏನಿದು ಪ್ರಕರಣ ?

ಅಮೆರಿಕದ ಪ್ರಮುಖ ಫ್ರೈಟ್ ಬ್ರೋಕರೇಜ್ ಸಂಸ್ಥೆ ‘ಟೋಟಲ್ ಕ್ವಾಲಿಟಿ ಲಾಜಿಸ್ಟಿಕ್ಸ್’ (TQL) ನಲ್ಲಿ ಚೆಲ್ಸಿಯಾ ವಾಲ್ಶ್ ಎಂಬ ಮಹಿಳೆ ಕೆಲಸ ಮಾಡುತ್ತಿದ್ದರು. 2021ರಲ್ಲಿ ಅವರು ಗರ್ಭಿಣಿಯಾಗಿದ್ದಾಗ ಕೆಲವು ಆರೋಗ್ಯ ಸಮಸ್ಯೆಗಳು ಎದುರಾಗಿದ್ದವು. ಅಕಾಲಿಕ ಪ್ರಸವವಾಗದಂತೆ ತಡೆಯಲು ಅವರಿಗೆ ಶಸ್ತ್ರಚಿಕಿತ್ಸೆಯೂ ನಡೆದಿತ್ತು. ವೈದ್ಯರು ಅವರಿಗೆ ಕಟ್ಟುನಿಟ್ಟಾದ ಬೆಡ್ ರೆಸ್ಟ್ ಸೂಚಿಸಿ, ಮನೆಯಿಂದಲೇ ಕೆಲಸ ಮಾಡಲು (WFH) ಸಲಹೆ ನೀಡಿದ್ದರು.

ಫೆಬ್ರವರಿ 15ರಂದು ಚೆಲ್ಸಿಯಾ ತಮ್ಮ ಅನಾರೋಗ್ಯದ ಸ್ಥಿತಿಯನ್ನು ವಿವರಿಸಿ ವರ್ಕ್ ಫ್ರಮ್ ಹೋಮ್‌ಗಾಗಿ ಅರ್ಜಿ ಸಲ್ಲಿಸಿದರು. ಆದರೆ ಸಂಸ್ಥೆಯ ಮ್ಯಾನೇಜ್‌ಮೆಂಟ್ ಆ ಮನವಿಯನ್ನು ತಿರಸ್ಕರಿಸಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಂಪನಿಯ ದರ್ಪ ಮತ್ತು ದುರಂತ:

“ಆಫೀಸಿಗೆ ಬಂದು ಕೆಲಸ ಮಾಡಿ, ಇಲ್ಲದಿದ್ದರೆ ಸಂಬಳವಿಲ್ಲದ ರಜೆ (Loss of Pay) ತೆಗೆದುಕೊಳ್ಳಿ” ಎಂದು ಕಂಪನಿ ಖಡಾಖಂಡಿತವಾಗಿ ಹೇಳಿತು. ಆರ್ಥಿಕ ಅಡಚಣೆ ಮತ್ತು ಇನ್ಶೂರೆನ್ಸ್ ಕಾರಣಗಳಿಂದಾಗಿ ಚೆಲ್ಸಿಯಾ ಅನಿವಾರ್ಯವಾಗಿ ವೈದ್ಯರ ಮಾತನ್ನು ಮೀರಿ ಮೂರು ದಿನಗಳ ಕಾಲ ಆಫೀಸಿಗೆ ಹೋಗಿ ಕೆಲಸ ಮಾಡಿದರು.

ಕೊನೆಗೆ ಫೆಬ್ರವರಿ 24ರಂದು ಕಂಪನಿಯು ಅವರಿಗೆ ಮನೆಯಿಂದ ಕೆಲಸ ಮಾಡಲು ಅನುಮತಿ ನೀಡಿತು. ಆದರೆ ಅಷ್ಟರಲ್ಲೇ ಆಗಬಾರದ್ದು ಆಗಿಹೋಗಿತ್ತು. ಅದೇ ದಿನ ಚೆಲ್ಸಿಯಾಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಕೇವಲ 21 ವಾರಗಳ ಗರ್ಭಿಣಿಯಾಗಿದ್ದ ಅವರು ‘ಮ್ಯಾಗ್ನೋಲಿಯಾ’ ಎಂಬ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಗು ಹುಟ್ಟಿದಾಗ ಹೃದಯ ಬಡಿತವಿತ್ತು, ಉಸಿರಾಟವೂ ಇತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು; ಕೇವಲ 90 ನಿಮಿಷಗಳ ನಂತರ ಆ ಪಸಿಪಾಪು ತಾಯಿಯ ಮಡಿಲಲ್ಲೇ ಪ್ರಾಣ ಬಿಟ್ಟಿತು.


ನ್ಯಾಯಾಲಯದ ಸಚಲನ ತೀರ್ಪು:

ಈ ದುರಂತಕ್ಕೆ ಕಂಪನಿಯ ನಿರ್ಲಕ್ಷ್ಯವೇ ಕಾರಣ ಎಂದು ಚೆಲ್ಸಿಯಾ ಕುಟುಂಬ ಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಹ್ಯಾಮಿಲ್ಟನ್ ಕೌಂಟಿ ಜ್ಯೂರಿ, ಕಂಪನಿಯ ನಡವಳಿಕೆಯು ಅತ್ಯಂತ ಜವಾಬ್ದಾರಿರಹಿತವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

  • ತೀರ್ಪು: ವೈದ್ಯಕೀಯ ತುರ್ತು ವಿನಂತಿಯನ್ನು ತಿರಸ್ಕರಿಸಿದ್ದೇ ಮಗುವಿನ ಸಾವಿಗೆ ಕಾರಣ ಎಂದು ಜ್ಯೂರಿ ನಿರ್ಧರಿಸಿತು.
  • ದಂಡ: ಘಟನೆಯಲ್ಲಿ ಶೇ. 90ರಷ್ಟು ತಪ್ಪು ಕಂಪನಿಯದ್ದೇ ಎಂದು ಸ್ಪಷ್ಟಪಡಿಸಿದ ಕೋರ್ಟ್, 22.5 ಮಿಲಿಯನ್ ಡಾಲರ್ (ಸುಮಾರು ₹210 ಕೋಟಿ) ಭಾರಿ ದಂಡ ವಿಧಿಸಿದೆ.

ವರ್ಷಕ್ಕೆ 6 ಬಿಲಿಯನ್ ಡಾಲರ್ ಆದಾಯವಿರುವ ಇಷ್ಟು ದೊಡ್ಡ ಸಂಸ್ಥೆ, ಒಬ್ಬ ಗರ್ಭಿಣಿಗೆ ಸಣ್ಣ ಸೌಲಭ್ಯ ನೀಡಲು ಸಾಧ್ಯವಾಗದಿರುವುದು ದುರದೃಷ್ಟಕರ ಎಂದು ವಕೀಲರು ವಾದಿಸಿದ್ದರು. ಸದ್ಯ ಈ ತೀರ್ಪು ಜಾಗತಿಕ ಮಟ್ಟದಲ್ಲಿ ವೈರಲ್ ಆಗಿದ್ದು, ಮಾನವೀಯತೆ ಮರೆತ ಕಾರ್ಪೊರೇಟ್ ಸಂಸ್ಥೆಗಳಿಗೆ ದೊಡ್ಡ ಎಚ್ಚರಿಕೆಯಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular