ಉಡುಪಿ: ಟ್ರೇಡಿಂಗ್ ಅಪ್ಲಿಕೇಶನ್ ನಲ್ಲಿ ಹೂಡಿಕೆ ಮಾಡಿ ಮಹಿಳೆಯೊಬ್ಬರು 11.75 ಲಕ್ಷ ರೂ. ಆನ್ಲೈನ್ ವಂಚನೆಗೆ ಒಳಗಾಗಿದ್ದು, ಉಡುಪಿಯ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರೇಡಿಂಗ್ ಬಗ್ಗೆ ತಿಳಿದುಕೊಳ್ಳಲು ಸಹನಾ ಎಂಬುವರು ಅಪ್ಲಿಕೇಶನ್ ಡೌನ್ಲೋಡ್ ಮಾಡಿದ್ದು, ಮುಂದೆ 15 ದಿನಗಳ ನಂತರ ಅಪರಿಚಿತ ವ್ಯಕ್ತಿ ಕರೆ ಮಾಡಿ ವಾಟ್ಸಾಪ್ ಗ್ರೂಪ್ ಗೆ ಸೇರಿಸಿದ್ದಾನೆ. ಅದರಲ್ಲಿ ಲಿಂಕ್ ಕಳುಹಿಸಿ ಇ-ಕೆವೈಸಿ ಡಿಟೇಲ್ ಭರ್ತಿ ಮಾಡುವಂತೆ ತಿಳಿಸಲಾಗಿದೆ.
ನಂತರ ಟ್ರೇಡಿಂಗ್ ಬಗ್ಗೆ ಆರೋಪಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಸಹನಾ ಮಾರ್ಚ್ 6ರಿಂದ 14 ರವರೆಗೆ ಹಂತ ಹಂತವಾಗಿ ಒಟ್ಟು 11.75 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ನಂತರ ಆರೋಪಿಗಳು ವರ್ಗಾವಣೆ ಮಾಡಿದ ಹಣವನ್ನಾಗಲಿ, ಲಾಭಾಂಶವನ್ನು ಆಗಲಿ ನೀಡದೆ ವಂಚಿಸಿದ್ದಾರೆ. ವಂಚನೆಗೊಳಗಾದ ಸಹನಾ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

