ನವದೆಹಲಿ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದಿಂದ ಉಂಟಾದ ಪ್ರಕ್ಷುಬ್ಧ ಸ್ಥಿತಿ ಹಲವು ದೇಶಗಳ ಮೇಲೆ ವಿವಿಧ ಕ್ಷೇತ್ರಗಳ ಮೇಲೆ ಬೀರುತ್ತಿದೆ. ಯುದ್ಧದ ಎಫೆಕ್ಟ್ ವಿಮಾನಯಾನ ಸೆಕ್ಟರ್ ಮೇಲೂ ಬೀರುತ್ತಿದೆ. ಏಪ್ರಿಲ್ 1ರಿಂದ ವಿಮಾನ ಪ್ರಯಾಣ ದುಬಾರಿಯಾಗಲಿದೆ.
ವಿಮಾನಗಳಿಗೆ ಬಳಸುವ ಎಟಿಎಫ್ (ATF- Aviation Turbine Fuel) ಅಥವಾ ಜೆಟ್ ಫುಯೆಲ್ಗಳ ಬೆಲೆ ಪ್ರತೀ ತಿಂಗಳ ಆರಂಭದಲ್ಲಿ ಪರಿಷ್ಕರಣೆ ಆಗುತ್ತದೆ. ಈ ಬಾರಿ, ಏಪ್ರಿಲ್ 1ರಂದು ಎಟಿಎಫ್ ಬೆಲೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಹಾಗಾಗಿ ವಿಮಾನ ಪ್ರಯಾಣದ ಟಿಕೆಟ್ ದರ ಗಣನೀಯವಾಗಿ ಏರಬಹುದು ಎನ್ನಲಾಗಿದೆ.
ದೇಶೀಯ ವಿಮಾನ ಹಾರಾಟದಲ್ಲಿ ಟಿಕೆಟ್ ದರಗಳಿಗೆ ಸರ್ಕಾರ ಮಿತಿ ಹಾಕಿತ್ತು. ಈ ಮಿತಿಗಿಂತ ಹೆಚ್ಚಿನ ದರ ವಿಧಿಸಬೇಕಿದ್ದರೆ ವಿಮಾನ ಕಂಪನಿಗಳು ಸರ್ಕಾರದ ಅನುಮತಿ ಕೇಳಬೇಕಿತ್ತು. ಮೊನ್ನೆ ಸರ್ಕಾರ ಈ ವಿಮಾನ ಪ್ರಯಾಣ ದರದ ಮಿತಿಯನ್ನು ಹಿಂಪಡೆದುಕೊಂಡಿದೆ. ಇದರೊಂದಿಗೆ ವಿಮಾನ ಸಂಸ್ಥೆಗಳು ಸರ್ಕಾರದ ಅನುಮೋದನೆ ಇಲ್ಲದೇ ಟಿಕೆಟ್ ದರ ಏರಿಸಬಹುದಾಗಿದೆ.
ವಿಮಾನ ಪ್ರಯಾಣ ಸಂಸ್ಥೆಗಳು ಇಂಧನದ ಬೆಲೆಗೆ ಅನುಗುಣವಾಗಿ ಮುಕ್ತವಾಗಿ ಬೆಲೆ ಪರಿಷ್ಕರಣೆ ಮಾಡಬಹುದು. ಈ ಏಪ್ರಿಲ್ನಲ್ಲಿ ಎಟಿಎಫ್ ಇಂಧನದ ಬೆಲೆ ಸಾಕಷ್ಟು ಹೆಚ್ಚುವುದರಿಂದ, ಟಿಕೆಟ್ ದರಗಳೂ ಸಹಜವಾಗಿ ಏರಿಕೆಯಾಗಬಹುದು. ಇದೇ ವೇಳೆ, ಏರ್ ಇಂಡಿಯಾ, ಆಕಾಶ ಏರ್ ಸಂಸ್ಥೆಗಳು ಫುಯೆಲ್ ಸರ್ಚಾರ್ಜ್ ಅನ್ನು ಏರಿಸಿವೆ. ಇದು ಟಿಕೆಟ್ ಬುಕಿಂಗ್ಗಳಲ್ಲಿ ಅನ್ವಯ ಆಗುತ್ತದೆ.

