ಕೇರಳಂ ವಿಧಾನಸಭೆ ಚುನಾವಣೆಗೆ ಬಿಜೆಪಿ ತಯಾರಿ ಜೋರಾಗಿದೆ. 140 ಸದಸ್ಯ ಬಲದ ವಿಧಾನಸಭೆಗೆ ಒಂದೇ ಹಂತದಲ್ಲಿ ಏಪ್ರಿಲ್ 9ರಂದು ಮತದಾನ ನಡೆಯುತ್ತಿದೆ. ಮೇ 4ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಶನಿವಾರ ಕೇರಳಂ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ನೇಮಮ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದರು. ಕೇರಳ ಚುನಾವಣೆಗಾಗಿ ಬಿಜೆಪಿ 160 ಜನರ ತಂಡವೊಂದನ್ನು ರಚನೆ ಮಾಡಿದೆ. ಆದರೆ ಈ ತಂಡದಲ್ಲಿ ಇರುವ ಎಲ್ಲರೂ ಸಹ ಬೇರೆ ರಾಜ್ಯದವರು.
ಈ ತಂಡದ ನೇತೃತ್ವವನ್ನು ಪಕ್ಷದ ಪ್ರಮುಖ ಚುನಾವಣಾ ತಂತ್ರಜ್ಞ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರು ವಹಿಸಿಕೊಂಡಿದ್ದಾರೆ. ಪಕ್ಷ ಅವರನ್ನು ರಾಜ್ಯ ಚುನಾವಣಾ ಉಸ್ತುವಾರಿಯಾಗಿ ನೇಮಕ ಮಾಡಿದೆ.
ಈ ಬಾರಿಯ ಕೇರಳಂ ವಿಧಾನಸಭೆ ಚುನಾವಣೆ ಮೇಲೆ ಭಾರೀ ಭರವಸೆಯನ್ನು ಬಿಜೆಪಿ ಇಟ್ಟುಕೊಂಡಿದೆ. ಪಕ್ಷವು ಸ್ಪರ್ಧಿಸುತ್ತಿರುವ ಕ್ಷೇತ್ರಗಳಲ್ಲಿ ಪ್ರಚಾರ ಮತ್ತು ಸಾಂಸ್ಥಿಕ ಚಟುವಟಿಕೆಗಳ ಜವಾಬ್ದಾರಿ ವಹಿಸಿಕೊಳ್ಳಲು ಇತರ ರಾಜ್ಯಗಳ 160 ನಾಯಕರ ತಂಡವನ್ನು ನಿಯೋಜನೆ ಮಾಡಲಾಗಿದೆ.
ಈ ತಂಡದ ನೇತೃತ್ವವನ್ನು ವಿನೋದ್ ತಾವ್ಡೆ ವಹಿಸಿದ್ದು, ತಂಡದಲ್ಲಿ ಹಾಲಿ ಸಚಿವರು, ಸಂಸದರು, ಶಾಸಕರು ಮತ್ತು ಹಿರಿಯ ನಾಯಕರು ಸೇರಿದ್ದು, ಅವರಿಗೆ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ.
ಎಲ್ಡಿಎಫ್ ಮತ್ತು ಮುಖ್ಯ ವಿರೋಧ ಪಕ್ಷವಾದ ಯುಡಿಎಫ್ ಇನ್ನೂ ಪೂರ್ಣ ಪ್ರಮಾಣದಲ್ಲಿ ಚುನಾವಣಾ ಸಿದ್ಧತೆಗಳನ್ನು ಆರಂಭಿಸಿಲ್ಲ. ಆದರೆ ಬಿಜೆಪಿಯ ಈ ತಂಡವು ಮೂರು ವಾರಗಳ ಹಿಂದೆಯೇ ಕೇರಳವನ್ನು ತಲುಪಿದೆ. ಪ್ರತಿಯೊಬ್ಬ ನಾಯಕನಿಗೂ ನಿರ್ದಿಷ್ಟ ಕ್ಷೇತ್ರಗಳ ಜವಾಬ್ದಾರಿ ಮತ್ತು ಜಿಲ್ಲೆಗಳ ಒಟ್ಟಾರೆ ಉಸ್ತುವಾರಿಯನ್ನು ನೀಡಲಾಗಿದೆ.
ಕೆಲವು ನಾಯಕರಿಗೆ ನಿರ್ದಿಷ್ಟ ಕ್ಷೇತ್ರಗಳ ಜವಾಬ್ದಾರಿ ನೀಡಲಾಗಿದ್ದರೆ, ಇತರರು ಜಿಲ್ಲಾ ಮಟ್ಟದ ಉಸ್ತುವಾರಿ ವಹಿಸಿಕೊಂಡು ತಳಮಟ್ಟದ ಕೆಲಸಗಳನ್ನು ಮತ್ತು ಚುನಾವಣಾ ಪೂರ್ವ ಪ್ರಚಾರ ಚಟುವಟಿಕೆಗಳನ್ನು ಸಮನ್ವಯಗೊಳಿಸುತ್ತಿದ್ದಾರೆ.
ಹಿಂದಿನ ಚುನಾವಣೆಗಳಲ್ಲೂ ಇತರ ರಾಜ್ಯಗಳ ನಾಯಕರನ್ನು ನೇಮಕ ಮಾಡಿದ್ದರಿಂದ, ಇಂತಹ ತಂಡ ರಚನೆಯಲ್ಲಿ ಅಂತಹ ವಿಶೇಷವೇನೂ ಇಲ್ಲ ಎಂದು ರಾಜ್ಯದ ನಾಯಕರು ಹೇಳಿದ್ದಾರೆ.
ವಿನೋದ್ ತಾವ್ಡೆ ಚುನಾವಣೆಗಳನ್ನು ನಿರ್ವಹಣೆ ಮಾಡುವ ಅಪಾರ ಅನುಭವ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ತಂಡದ ಪ್ರಮುಖರನ್ನಾಗಿ ನೇಮಕ ಮಾಡಲಾಗಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.
ವಿನೋದ್ ತಾವ್ಡೆ ಈ ಹಿಂದೆ ಉಸ್ತುವಾರಿ ವಹಿಸಿದ್ದ ಬಿಹಾರ ಮತ್ತು ಹರ್ಯಾಣ ರಾಜ್ಯದ ವಿಧಾನಸಭಾ ಚುನಾವಣೆಗಳಲ್ಲಿ ಎನ್ಡಿಎ ಮೈತ್ರಿಕೂಟವು ಭರ್ಜರಿ ಜಯ ಸಾಧಿಸಿತ್ತು. ಈ ಹಿನ್ನಲೆಯಲ್ಲಿ ಕೇರಳದ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ.
ತಿರುವನಂತಪುರದಲ್ಲಿರುವ ಬಿಜೆಪಿಯ ರಾಜ್ಯ ಕೇಂದ್ರ ಕಚೇರಿಯಾದ ‘ಮಾರ್ಜಿ ಭವನ’ದ ಕೆಳಮಹಡಿಯಲ್ಲಿರುವ ಎನ್ಡಿಎ ಚುನಾವಣಾ ನಿರ್ವಹಣಾ ಸಮಿತಿ ಕಚೇರಿಯಲ್ಲಿ ವಿನೋದ್ ತಾವ್ಡೆ ಅವರಿಗೆ ಪ್ರತ್ಯೇಕ ಸ್ಥಳವನ್ನು ನಿಗದಿಪಡಿಸಲಾಗಿದೆ. ರಾಜ್ಯದ ಮತ್ತೊಬ್ಬ ಉಸ್ತುವಾರಿ ನಾಯಕಿ ಶೋಭಾ ಕರಂದ್ಲಾಜೆ ಅವರೊಂದಿಗೆ ಸೇರಿ ಅವರು ಚುನಾವಣಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

