ಮುಂಬೈ: ಬಾಲಿವುಡ್ ಚಿತ್ರರಂಗದಲ್ಲಿ ತನ್ನ ವಿಶಿಷ್ಟ ಧ್ವನಿ ಮತ್ತು ಅದ್ಭುತ ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿರುವ ನಟಿ ರಾಣಿ ಮುಖರ್ಜಿ ಇಂದು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕೇವಲ ಗ್ಲಾಮರ್ ಗೊಂಬೆಯಾಗದೆ, ಸವಾಲಿನ ಪಾತ್ರಗಳ ಮೂಲಕ ಭಾರತೀಯ ಸಿನಿಮಾದಲ್ಲಿ ತಮ್ಮದೇ ಆದ ಭದ್ರ ಬುನಾದಿ ಹಾಕಿದ ರಾಣಿ ಮುಖರ್ಜಿ ಅವರ ಸಿನಿಮಾ ಪಯಣ ನಿಜಕ್ಕೂ ಸ್ಫೂರ್ತಿದಾಯಕ.
ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದ ರಾಣಿ, 1996ರಲ್ಲಿ ತಮ್ಮ ತಂದೆ ರಾಮ್ ಮುಖರ್ಜಿ ನಿರ್ದೇಶನದ ‘ಬಿಯರ್ ಫೂಲ್’ ಎಂಬ ಬೆಂಗಾಲಿ ಚಿತ್ರದ ಮೂಲಕ ನಟನೆಗೆ ಕಾಲಿಟ್ಟರು. ಆದರೆ ಅವರು ಹಿಂದಿ ಚಿತ್ರರಂಗಕ್ಕೆ ಪರಿಚಯವಾಗಿದ್ದು ‘ರಾಜಾ ಕಿ ಆಯೇಗಿ ಬಾರಾತ್’ ಚಿತ್ರದ ಮೂಲಕ. ಮೊದಲ ಚಿತ್ರದಲ್ಲೇ ಗಂಭೀರ ಪಾತ್ರ ನಿರ್ವಹಿಸಿ ಗಮನ ಸೆಳೆದ ರಾಣಿ ಅವರಿಗೆ ದೊಡ್ಡ ಬ್ರೇಕ್ ನೀಡಿದ್ದು ಕರಣ್ ಜೋಹರ್ ನಿರ್ದೇಶನದ ‘ಕುಚ್ ಕುಚ್ ಹೋತಾ ಹೈ’. ಅಲ್ಲಿಂದ ಆರಂಭವಾದ ಇವರ ಯಶಸ್ಸಿನ ಓಟ ಇಂದಿಗೂ ನಿಂತಿಲ್ಲ.
ತಮ್ಮ ವೃತ್ತಿಜೀವನದಲ್ಲಿ ರಾಣಿ ಮುಖರ್ಜಿ ನೀಡಿದ ಕೆಲವು ಮರೆಯಲಾಗದ ಸಿನಿಮಾಗಳು ಅವರ ನಟನಾ ಕೌಶಲಕ್ಕೆ ಸಾಕ್ಷಿಯಾಗಿವೆ. ‘ಸಾಥಿಯಾ’ ಮತ್ತು ‘ಚಲ್ತೇ ಚಲ್ತೇ’ ಚಿತ್ರಗಳ ಮೂಲಕ ಪ್ರೇಮಿಗಳ ಮನ ಗೆದ್ದರೆ, ಸಂಜಯ್ ಲೀಲಾ ಭನ್ಸಾಲಿ ಅವರ ‘ಬ್ಲ್ಯಾಕ್’ ಚಿತ್ರದಲ್ಲಿ ಅಂಧ ಮತ್ತು ಕಿವುಡ ಯುವತಿಯಾಗಿ ಅವರು ನೀಡಿದ ಪ್ರದರ್ಶನ ಇಂದಿಗೂ ಬಾಲಿವುಡ್ನ ಅತ್ಯುತ್ತಮ ನಟನೆಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ‘ನೋ ಒನ್ ಕಿಲ್ಡ್ ಜೆಸ್ಸಿಕಾ’ ಚಿತ್ರದ ಬೋಲ್ಡ್ ಪತ್ರಕರ್ತೆಯ ಪಾತ್ರ ಅಥವಾ ‘ಮರ್ದಾನಿ’ ಸರಣಿಯ ಖಡಕ್ ಪೊಲೀಸ್ ಅಧಿಕಾರಿ ಶಿವಾಣಿ ಶಿವಾಜಿ ರಾಯ್ ಪಾತ್ರಗಳು ರಾಣಿ ಅವರ ವೈವಿಧ್ಯತೆಗೆ ಹಿಡಿದ ಕೈಗನ್ನಡಿ.
ವೈಯಕ್ತಿಕ ಜೀವನವನ್ನು ಸದಾ ಮಾಧ್ಯಮಗಳಿಂದ ದೂರವಿಟ್ಟ ರಾಣಿ, 2014ರಲ್ಲಿ ಖ್ಯಾತ ನಿರ್ದೇಶಕ ಆದಿತ್ಯ ಚೋಪ್ರಾ ಅವರನ್ನ ವಿವಾಹವಾದರು. ಮದುವೆಯ ನಂತರ ದೀರ್ಘ ವಿರಾಮ ಪಡೆದರೂ, ಮರಳಿ ಬಂದಾಗ ‘ಹಿಚ್ಕಿ’ ಮತ್ತು ‘ಮಿಸಸ್ ಚಟರ್ಜಿ ವರ್ಸಸ್ ನಾರ್ವೆ’ಯಂತಹ ಪವರ್ಫುಲ್ ಸಿನಿಮಾಗಳ ಮೂಲಕ ತಾವಿನ್ನೂ ರೇಸ್ನಲ್ಲಿರುವುದನ್ನು ಸಾಬೀತುಪಡಿಸಿದರು. ಇಂದಿಗೂ ಹೊಸ ತಲೆಮಾರಿನ ನಟಿಯರಿಗೆ ಸ್ಪರ್ಧೆ ನೀಡುತ್ತಿರುವ ರಾಣಿ ಮುಖರ್ಜಿ, ಕೇವಲ ನಟಿಯಲ್ಲದೆ ಮಹಿಳಾ ಪ್ರಧಾನ ಸಿನಿಮಾಗಳಿಗೆ ಹೊಸ ಮೆರುಗು ನೀಡಿದ ಐಕಾನ್ ಆಗಿ ಹೊರಹೊಮ್ಮಿದ್ದಾರೆ.

