ಶಿವಮೊಗ್ಗ : ಇಲ್ಲಿನ ಪ್ರಸಿದ್ಧ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮದಲ್ಲಿ (Thyavarekoppa Safari) ಕರ್ತವ್ಯ ನಿರ್ವಹಿಸುತ್ತಿದ್ದ ಪಶುವೈದ್ಯೆಯೊಬ್ಬರು ನೀರಾನೆ ದಾಳಿಯಿಂದ ಮೃತಪಟ್ಟಿದ್ದಾರೆ.
ಬೆಂಗಳೂರು ಮೂಲದ ಡಾ. ಸಮೀಕ್ಷಾ ರೆಡ್ಡಿ (27). ಇವರು ಮೃಗಾಲಯದಲ್ಲಿ ಪಶುವೈದ್ಯ ಅಧಿಕಾರಿಯಾಗಿ ಆಯ್ಕೆಯಾಗಿ ಪ್ರಸ್ತುತ ತರಬೇತಿ ಪಡೆಯುತ್ತಿದ್ದರು.ಗುರುವಾರ ರಾತ್ರಿ ಡಾ. ಸಮೀಕ್ಷಾ ಅವರು ಹಕ್ಕಿಯೊಂದರ ಚಿಕಿತ್ಸೆಗಾಗಿ ಮೃಗಾಲಯದ ಆಸ್ಪತ್ರೆಗೆ ತೆರಳಿದ್ದರು. ನಂತರ ಅಲ್ಲಿದ್ದ ಗರ್ಭಿಣಿ ನೀರಾನೆ ದೇಹದ ಉಷ್ಣತೆಯನ್ನು ಥರ್ಮಲ್ ಕ್ಯಾಮೆರಾ ಮೂಲಕ ಪರೀಕ್ಷಿಸಲು ಅದರ ಆವರಣದ ಒಳಗೆ ಹೋದಾಗ, ನೀರಾನೆ ಹಠಾತ್ತಾಗಿ ಅವರ ಮೇಲೆ ದಾಳಿ ಮಾಡಿದೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ತನಿಖೆಗೆ ಆದೇಶ: ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಘಟನೆಗೆ ಸುರಕ್ಷತಾ ಲೋಪಗಳಿವೆಯೇ ಎಂಬ ಬಗ್ಗೆ 7 ದಿನಗಳೊಳಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ.ಮೃತ ವೈದ್ಯೆಯ ಕುಟುಂಬಕ್ಕೆ ನಿಯಮಾನುಸಾರ ತಕ್ಷಣವೇ ಪರಿಹಾರ ವಿತರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಕಟ್ಟುನಿಟ್ಟಿನ ಸೂಚನೆ: ರಾಜ್ಯದ ಎಲ್ಲಾ ಮೃಗಾಲಯಗಳಲ್ಲಿ ವನ್ಯಜೀವಿಗಳ ಚಿಕಿತ್ಸೆಯ ಸಂದರ್ಭದಲ್ಲಿ ಕಡ್ಡಾಯವಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು (SOP) ಪಾಲಿಸುವಂತೆ ಮತ್ತು ಹೆಚ್ಚಿನ ಜಾಗರೂಕತೆ ವಹಿಸುವಂತೆ ಸಚಿವರು ತಿಳಿಸಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ಪಷ್ಟನೆ
ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿ ಗರ್ಭಿಣಿ ನೀರುಕುದುರೆಯನ್ನು ಪರೀಕ್ಷಿಸಲು ತೆರಳಿದ್ದ ಪಶುವೈದ್ಯೆ ಡಾ.ಸಮೀಕ್ಷಾ ರೆಡ್ಡಿಯವರ ಮೇಲೆ ನೀರುಕುದುರೆ ಆಕಸ್ಮಿಕವಾಗಿ ದಾಳಿ ನಡೆಸಿದ್ದು, ಶಿವಮೊಗ್ಗದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮಾ.20 ರ ಬೆಳಿಗ್ಗೆ 6.30 ಕ್ಕೆ ಮೃತಪಟ್ಟಿರುತ್ತಾರೆ.ಡಾ.ಸಮೀಕ್ಷಾ ರೆಡ್ಡಿ, 27 ವರ್ಷ, ಬೆಂಗಳೂರು ಇವರು ಪಶು ವೈದ್ಯಾಧಿಕಾರಿಯಾಗಿ ಆಯ್ಕೆಯಾಗಿ ಮೃಗಾಲಯದ ಪಶುವೈದ್ಯರಿಂದ ತರಬೇತಿ ಪಡೆಯುತ್ತಿದ್ದರು. ಅವರು ಮಾ.19 ರಂದು ರಾತ್ರಿ 10.30 ಕ್ಕೆ ಮೃಗಾಲಯದ ಆಸ್ಪತ್ರೆಗೆ ತೆರಳಿ ಸನ್ ಕೊನ್ಯೂರ್ ಪಕ್ಷಿಗೆ ಫಾಲೊ ಅಪ್ ಚಿಕಿತ್ಸೆ ನೀಡಿದ್ದರು. ನಂತರ ರಾತ್ರಿ 11.45 ಕ್ಕೆ ಥರ್ಮಲ್ ಕ್ಯಾಮೆರಾ ಬಳಸಿ ಗರ್ಭಿಣಿ ನೀರು ಕುದರೆಯ(ಹಿಪ್ಪೊಪೊಟಮಸ್) ತಾಪಮಾನ ಪರೀಕ್ಷಿಸುವ ವೇಳೆ ನೀರುಕುದುರೆ ದಾಳಿ ನಡೆಸಿತ್ತು ಎಂದು ಹುಲಿ-ಸಿಂಹಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

