ಬೆಂಗಳೂರು: ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಸಿಎಂ ಹಸ್ತಕ್ಷೇಪ ವಿಚಾರಕ್ಕೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಮುಖ್ಯಮಂತ್ರಿಗೆ ನೌಕರರ ವರ್ಗಾವಣೆಗಿಂತ ಮಾಡಬೇಕಾದ ಉತ್ತಮ ಕೆಲಸಗಳಿವೆ ಎಂದು ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.
ಸರ್ಕಾರಿ ನೌಕರರ ವರ್ಗಾವಣೆಯನ್ನು ವಿಚಾರವನ್ನು ಆಯಾ ಇಲಾಖೆಗೆ ಬಿಡಬೇಕು ಎಂದು ಹೇಳಲಾಗಿದೆ. ಮುಖ್ಯಮಂತ್ರಿಗಳ ಕಚೇರಿ ವರ್ಗಾವಣೆಯ ಮನವಿ ಸ್ವೀಕರಿಸಬಾರದು. ಇಂತಹ ವಿಚಾರಗಳಿಗೆ ಸಿಎಂ ತಮ್ಮ ಸಮಯ ವಿನಿಯೋಗಿಸಬಾರದು. ಹೈಕೋರ್ಟ್ ಈ ಆದೇಶದ ಪ್ರತಿಯನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲು ಸೂಚನೆ ನೀಡಲಾಗಿದೆ.
ಮುಖ್ಯಮಂತ್ರಿ ನೀಡುವ ವರ್ಗಾವಣೆ ಪತ್ರಗಳ ಬಗ್ಗೆ ಹೈಕೋರ್ಟ್ ಸಿಎಸ್ ನಿಲುವು ಕೇಳಿದ್ದು, ಸಿಎಂ ಕಚೇರಿ ಟಿಪ್ಪಣಿಗಳು ಕೇವಲ ಶಿಫಾರಸುಗಳಷ್ಟೇ. ಸಂಬಂಧಪಟ್ಟ ಇಲಾಖೆ ವರ್ಗಾವಣೆ ಆದೇಶ ನೀಡುತ್ತದೆ ಎಂದು ಸಿಎಸ್ ಉತ್ತರಿಸಿದ್ದರು. ಬೆಸ್ಕಾಂ ಎಇ ಎಸ್. ಚೇತನ್ ಎಂಬುವರ ಅರ್ಜಿಯ ವಿಚಾರಣೆಯ ವೇಳೆ ಹೈಕೋರ್ಟ್ ಈ ಆದೇಶ ನೀಡಿದೆ.

