ಬೆಂಗಳೂರು: ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಬಾಲಕಿಯ ಗುಪ್ತಾಂಗ ಸೇರಿ ದೇಹದ ಮೇಲೆ 17 ಬಾರಿ ಚಾಕುವಿನಿಂದ ಇರಿದು ಭಾವಿ ಪತಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಸೈಯದ್ ಶಬೀಲ್ ಇಂತಹ ಘೋರ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಕೋಲಾರ ಮೂಲದ ಅಪ್ರಾಪ್ತೆಯನ್ನು ಚಾಕುವಿನಿಂದ ಬರ್ಬರವಾಗಿ ಇರಿದು ಹತ್ಯೆ ಮಾಡಿದ್ದಾನೆ. ಬೆಂಗಳೂರಿನಲ್ಲಿರುವ ಅಜ್ಜಿ ಮನೆಗೆ ಆಗಾಗ ಕೋಲಾರದಿಂದ ಬರುತ್ತಿದ್ದ ಅಪ್ರಾಪ್ತೆಗೆ ಆರೋಪಿ ಪರಿಚಯವಾಗಿದೆ. ಇಬ್ಬರ ನಡುವೆ ಪ್ರೀತಿಯಾಗಿ 2025 ಜೂನ್ ನಲ್ಲಿ ಹುಡುಗಿ ಮನೆಯವರು ಎಂಗೇಜ್ಮೆಂಟ್ ಮಾಡಿದ್ದಾರೆ. ಅವರ ಮದುವೆ ಆಗಬೇಕಿತ್ತು.
ಎಂಗೇಜ್ಮೆಂಟ್ ಆದ ನಂತರ ಆರೋಪಿ ಅಪ್ರಾಪ್ತೆ ಮೇಲೆ ಅನುಮಾನ ಪಡುತ್ತಿದ್ದ. ಡಿಜೆ ಹಳ್ಳಿಯಿಂದ ಸ್ವಲ್ಪ ದೂರದ ಸಕ್ಕರೆ ಮಂಡಿಯಲ್ಲಿ ಸಂಬಂಧಿಕರ ಪಾಳು ಬಿದ್ದ ಜಾಗದಲ್ಲಿ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು. ಅಲ್ಲಿಗೆ ಶಬೀಲ್ ಹುಡುಗಿಯನ್ನು ಕರೆಸಿಕೊಂಡಿದ್ದಾನೆ. ಆಕೆ ಮನೆಯಲ್ಲಿಯೇ ಮೊಬೈಲ್ ಬಿಟ್ಟು ಹೋಗಿದ್ದಾಳೆ. ಬಹು ಹೊತ್ತಿನವರೆಗೂ ಮನೆಗೆ ಬಾರದ ಕಾರಣ ಹುಡುಕಾಟ ನಡೆಸಲಾಗಿದೆ. ಶಬೀಲ್ ಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರ ಮನೆ ಬಳಿ ಹೋಗಿ ವಿಚಾರಿಸಿದಾಗ ಇಬ್ಬರೂ ಭೇಟಿಯಾಗುತ್ತಿದ್ದ ಜಾಗದ ಬಗ್ಗೆ ಹೇಳಿದ್ದಾರೆ.
ಅಲ್ಲಿಗೆ ಹೋದಾಗ ರಕ್ತದ ಮಡುವಿನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಅಪ್ರಾಪ್ತೆ ಶವ ಪತ್ತೆಯಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆಕೆಯ ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ದೇಹದ ಮೇಲೆ 17 ಬಾರಿ ಚುಚ್ಚಿ ಕೊಯ್ದು ಕುತ್ತಿಗೆ ಕೊಯ್ದು ಕ್ರೌರ್ಯ ಮೆರೆದಿದ್ದಾನೆ ಎಂದು ಗೊತ್ತಾಗಿದೆ. ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ.

