ಕೋಲಾರ: ಹಾಲು ಉತ್ಪಾದಕರಿಗೆ ಯುಗಾದಿ ಹಬ್ಬಕ್ಕೆ ಕೋಮುಲ್ ನಿಂದ ಗಿಫ್ಟ್ ಸಿಕ್ಕಿದೆ. ಹಾಲು ಖರೀದಿ ದರ ಪರಿಷ್ಕರಣೆ ಮಾಡಲಾಗಿದ್ದು, ಪ್ರತಿ ಲೀಟರ್ ಗೆ 2 ರೂ. ಹೆಚ್ಚಳ ಮಾಡಲಾಗಿದೆ ಎಂದು ಮಾಲೂರು ಶಾಸಕ ಹಾಗೂ ಕೋಮುಲ್ ಅಧ್ಯಕ್ಷ ಕೆ.ವೈ. ನಂಜೇಗೌಡ ಹೇಳಿದ್ದಾರೆ.
ಹಾಲು ಖರೀದಿ ದರ ಪ್ರತಿ ಲೀಟರ್ ಗೆ ಎರಡು ರೂಪಾಯಿ ಹೆಚ್ಚಳ ಮಾಡಲಾಗಿದೆ. ಉತ್ಪಾದಕರಿಗೆ ಲೀಟರ್ ಗೆ 37.40 ರೂ. ಪಾವತಿಸಲಾಗುವುದು. ಬೇಸಿಗೆಯಲ್ಲಿ ಒಕ್ಕೂಟದಿಂದ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದ್ದಾರೆ.
ಮಾರ್ಚ್ 18ರಿಂದಲೇ ಹಾಲು ಖರೀದಿ ದರ ಹೆಚ್ಚಳ ಜಾರಿಗೆ ಬರಲಿದೆ. ಹಾಲಿನ ಶೇಖರಣೆ ಹೆಚ್ಚಳ ಮತ್ತು ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಯುಗಾದಿ ಹಬ್ಬದ ಪ್ರಯುಕ್ತ ಒಕ್ಕೂಟದಿಂದ ಸಂಘಕ್ಕೆ ಶೇಕಡ 4 ಫ್ಯಾಟ್, ಶೇಕಡ 8.5 ರಷ್ಟು ಎಸ್ಎನ್ಎಫ್ ಅಂಶವುಳ್ಳ ಪ್ರತಿ ಲೀಟರ್ ಹಾಲಿಗೆ 37.85 ರೂ. ಜೊತೆಗೆ ಎರಡು ರೂ. ಸೇರಿಸಿ 39.85 ರೂ. ಪಾವತಿಸಲಾಗುವುದು. ಉತ್ಪಾದಕರಿಗೆ 37.40 ರೂ. ಪಾವತಿಸಲು ಒಕ್ಕೂಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಒಕ್ಕೂಟದಲ್ಲಿ ಕಾರ್ಯ ನಿರ್ವಹಿಸುವ 202 ಕಾಯಂ ಸಿಬ್ಬಂದಿಗೆ 75,000 ರೂ. ಎಕ್ಸ್‌ಗ್ರೇಷಿಯಾ ಪಾವತಿಸಲು, 1105 ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆಯಡಿ ಅವರ ಮೂಲವೇತನ ಮತ್ತು ತುಟ್ಟಿಭತ್ಯೆ ಮೇಲಿನ ಶೇಕಡ 8.33 ರಷ್ಟು ಬೋನಸ್ ಆಗಿ ಒಟ್ಟಾರೆ 3.5 ಕೋಟಿ ರೂಪಾಯಿ ಪಾವತಿಸಲಾಗುವುದು ಎಂದು ಹೇಳಿದ್ದಾರೆ.

