ಪ್ರಮುಖ ಟೆಕ್ ಕಂಪನಿ ಡೆಲ್ ಟೆಕ್ನಾಲಜೀಸ್ (Dell Technologies) ಯಾರಿಗೂ ತಿಳಿಯದಂತೆ ಸದ್ದಿಲ್ಲದೆ ದೊಡ್ಡ ಮಟ್ಟದ ಉದ್ಯೋಗ ಕಡಿತ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. 2026ರ ಹಣಕಾಸು ವರ್ಷದಲ್ಲಿ ಕಂಪನಿಯು ಒಟ್ಟು 11,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ಕಂಪನಿಯು ಇತ್ತೀಚೆಗೆ ಸಲ್ಲಿಸಿದ ’10-K’ ವರದಿಯಲ್ಲಿ ಈ ಆಘಾತಕಾರಿ ವಿಷಯ ಬಹಿರಂಗವಾಗಿದೆ. ಈ ಕಡಿತದ ಮೂಲಕ ಕಂಪನಿಯು ತನ್ನ ಒಟ್ಟು ಉದ್ಯೋಗಿಗಳಲ್ಲಿ ಸುಮಾರು 10 ಪ್ರತಿಶತದಷ್ಟು ಮಂದಿಯನ್ನು ಕಡಿಮೆ ಮಾಡಿದೆ.
ಜನವರಿ 2025 ರ ವೇಳೆಗೆ 1,08,000 ರಷ್ಟಿದ್ದ ಉದ್ಯೋಗಿಗಳ ಸಂಖ್ಯೆ, ಜನವರಿ 31, 2026 ರ ವೇಳೆಗೆ 97,000 ಕ್ಕೆ ಕುಸಿದಿದೆ. ಈ ಲೇಆಫ್ಗಳ ಬಗ್ಗೆ ಡೆಲ್ ಹೊರಗಡೆ ಎಲ್ಲಿಯೂ ಅಧಿಕೃತವಾಗಿ ಘೋಷಿಸಿರಲಿಲ್ಲ. ಆದರೆ, ಉದ್ಯೋಗಿಗಳ ಸೆಟಲ್ಮೆಂಟ್ಗಾಗಿ 569 ಮಿಲಿಯನ್ ಡಾಲರ್ ಖರ್ಚು ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವೆಚ್ಚಗಳನ್ನು ಕಡಿಮೆ ಮಾಡುವ ಕಾರ್ಯತಂತ್ರದ ಭಾಗವಾಗಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.
ವೆಚ್ಚ ನಿರ್ವಹಣೆ ಮತ್ತು ವ್ಯಾಪಾರ ಆಧುನೀಕರಣದ ಮೇಲೆ ಗಮನ
ತನ್ನ ಕಾರ್ಯಚಟುವಟಿಕೆಗಳನ್ನು ಆಧುನೀಕರಿಸಲು, ವೆಚ್ಚಗಳನ್ನು ನಿಯಂತ್ರಿಸಲು ಮತ್ತು ದೀರ್ಘಕಾಲೀನ ವ್ಯಾಪಾರ ಗುರಿಗಳಿಗೆ ಅನುಗುಣವಾಗಿ ಸಂಪನ್ಮೂಲಗಳನ್ನು ಹಂಚಿಕೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಡೆಲ್ ಹೇಳಿದೆ. ವಿಶೇಷವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಎಂಟರ್ಪ್ರೈಸ್ ಇನ್ಫ್ರಾಸ್ಟ್ರಕ್ಚರ್ ಕ್ಷೇತ್ರಗಳಲ್ಲಿ ಭಾರಿ ಹೂಡಿಕೆ ಮಾಡುತ್ತಿರುವುದಾಗಿ ಕಂಪನಿ ತಿಳಿಸಿದೆ.
ಮೂರು ವರ್ಷಗಳಲ್ಲಿ 27% ಉದ್ಯೋಗಿಗಳ ಕಡಿತ
ಡೆಲ್ನಲ್ಲಿ ಉದ್ಯೋಗಿಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ಕೆಲವು ವರ್ಷಗಳಿಂದ ಇದೇ ಟ್ರೆಂಡ್ ಮುಂದುವರಿಯುತ್ತಿದೆ:
- 2023: ಸುಮಾರು 1,33,000 ಉದ್ಯೋಗಿಗಳು
- 2024: ಸುಮಾರು 1,20,000 ಉದ್ಯೋಗಿಗಳು
- 2025: ಸುಮಾರು 1,08,000 ಉದ್ಯೋಗಿಗಳು
- 2026: ಸುಮಾರು 97,000 ಉದ್ಯೋಗಿಗಳು
ಅಂದರೆ, ಕಳೆದ ಮೂರು ವರ್ಷಗಳಲ್ಲಿ ಕಂಪನಿಯ ಒಟ್ಟು ಉದ್ಯೋಗಿಗಳಲ್ಲಿ ಸುಮಾರು 27 ಪ್ರತಿಶತದಷ್ಟು ಇಳಿಕೆಯಾಗಿದೆ. ಇದರಿಂದಾಗಿ 36,000 ಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದಾರೆ.
ಟೆಕ್ ಉದ್ಯಮದಲ್ಲಿ ಹೆಚ್ಚುತ್ತಿರುವ ಲೇ ಆಫ್ ಟ್ರೆಂಡ್
ಇಡೀ ಟೆಕ್ ಉದ್ಯಮವು ವೆಚ್ಚವನ್ನು ಕಡಿಮೆ ಮಾಡಿ AI ಮೇಲೆ ಹೂಡಿಕೆಯನ್ನು ಹೆಚ್ಚಿಸುವಲ್ಲಿ ತೊಡಗಿದೆ. Layoffs.fyi ಡೇಟಾ ಪ್ರಕಾರ, 2026 ರಲ್ಲಿ ಇದುವರೆಗೆ ಸುಮಾರು 66 ಟೆಕ್ ಕಂಪನಿಗಳು 39,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿವೆ.
Meta, Atlassian, Block ಕಂಪನಿಗಳೂ ಇದೇ ಹಾದಿಯಲ್ಲಿ: ವರದಿಗಳ ಪ್ರಕಾರ, Meta ಕೂಡ ಲೇಆಫ್ಗೆ ಯೋಜಿಸುತ್ತಿದೆ. ಮತ್ತೊಂದೆಡೆ, Atlassian ಕಂಪನಿಯು AI ಆಧಾರಿತ ಹುದ್ದೆಗಳತ್ತ ಗಮನ ಹರಿಸಲು ಸುಮಾರು 1,600 ಉದ್ಯೋಗಿಗಳನ್ನು (ಒಟ್ಟು ಸಿಬ್ಬಂದಿಯಲ್ಲಿ 10%) ವಜಾಗೊಳಿಸಲು ಚಿಂತಿಸುತ್ತಿದೆ. ಇನ್ನು Block ಕಂಪನಿಯು ತನ್ನ ಉದ್ಯೋಗಿಗಳಲ್ಲಿ ಸುಮಾರು 40% ರಷ್ಟು, ಅಂದರೆ ಸುಮಾರು 4,000 ಜನರನ್ನು ತೆಗೆದುಹಾಕಲು ಮುಂದಾಗಿದೆ.

