ಬೆಂಗಳೂರು: ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಮಣಿದ ನೈರುತ್ಯ ರೈಲ್ವೆ ವಿಭಾಗ ಮಂಗಳವಾರ ನಡೆಯಬೇಕಿದ್ದ ರೈಲ್ವೆ ಪದೋನ್ನತಿ ಪರೀಕ್ಷೆಗಳನ್ನು ರದ್ದುಪಡಿಸಿದೆ. ಮಾರ್ಚ್ 17 ಮತ್ತು 18ರಂದು ನಡೆಯಬೇಕಿದ್ದ ರೈಲ್ವೆ ಇಲಾಖೆ ಬಡ್ತಿ ಪರೀಕ್ಷೆಗಳನ್ನು ಮುಂದೂಡಿರುವುದಾಗಿ ನೈರುತ್ಯ ರೈಲ್ವೆ ತಿಳಿಸಿದೆ.
ಹುಬ್ಬಳ್ಳಿ ವಿಭಾಗ ಸೇರಿದಂತೆ ಪ್ರಧಾನ ಕಚೇರಿಯ ಸಿಬ್ಬಂದಿ ಒಳಗೊಂಡ ಒಟ್ಟು 12 ಇಲಾಖೆ ಪರೀಕ್ಷೆಗಳನ್ನು ಮಾರ್ಚ್ 17, 18 ರಂದು ನಡೆಸಲು ಯೋಜಿಸಲಾಗಿತ್ತು. ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಪರೀಕ್ಷೆಗೆ ಅಡ್ಡಿಪಡಿಸಿ ಇಲಾಖಾ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿಯೂ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಹೀಗಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹೋರಾಟಕ್ಕೆ ಮಣಿದ ರೈಲ್ವೆ ಪರೀಕ್ಷಾ ಮತ್ತು ನೇಮಕಾತಿ ಅಧಿಕಾರಿಗಳು, ಕರವೇ ಅಧ್ಯಕ್ಷ ಟಿ.ಎ. ನಾರಾಯಣ ಗೌಡರಿಗೆ ದೂರವಾಣಿ ಕರೆ ಮಾಡಿ ಪರೀಕ್ಷೆ ರದ್ದು ಮಾಡಿರುವುದಾಗಿ ತಿಳಿಸಿದ್ದಾರೆ.
ಕನ್ನಡ ಬಿಟ್ಟು ಹಿಂದಿ, ಇಂಗ್ಲಿಷ್ ನಲ್ಲಿ ಮುಂಬಡ್ತಿ ಪರೀಕ್ಷೆ ಕೈಗೊಂಡು ನಡೆಸಲು ಮುಂದಾಗಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು. ಕನ್ನಡಿಗರ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ ನಿನ್ನೆ ಮತ್ತು ಇಂದು ನಡೆಯಬೇಕಿದ್ದ ರೈಲ್ವೆ ಇಲಾಖೆ ಪದೋನ್ನತಿ ಪರೀಕ್ಷೆ ರದ್ದುಪಡಿಸಿದ್ದು ಶೀಘ್ರವೇ ಹೊಸ ದಿನಾಂಕ ಪ್ರಕಟಿಸುವುದಾಗಿ ತಿಳಿಸಿದೆ.

