ಬೆಂಗಳೂರು : ಬೆಂಗಳೂರಿನಲ್ಲಿ ಜೈ ಬಾಂಗ್ಲಾ ಎಂದು ಘೋಷಣೆ ಕೂಗಿದ್ದ ಮಹಿಳೆಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಾಮೀನು ಕೋರಿ ಆನೇಕಲ್ ತಾಲೂಕಿನ ಹುಲಿಮಂಗಲ ಪೋಡು ಗ್ರಾಮದ ಸರ್ಬಾನು ಖಾತೂನ್ (25) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ರಾಚಯ್ಯ ಅವರ ಪೀಠ ಈ ಆದೇಶ ಮಾಡಿದೆ.
ಅರ್ಜಿದಾರರಿಗೆ ಇಬ್ಬರು ಅಪ್ರಾಪ್ತ ಮಕ್ಕಳಿದ್ದಾರೆ. ಆ ಮಕ್ಕಳನ್ನು ಅರ್ಜಿದಾರೆಯೇ ನೋಡಿಕೊಳ್ಳಬೇಕಿದೆ. ಪ್ರಕರಣದ ಸತ್ಯಾಸತ್ಯತೆ ಹಾಗೂ ಸಂದರ್ಭಗಳನ್ನು ಪರಿಗಣಿಸಿದರೆ ಸೂಕ್ತ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಬಹುದು ಎಂದು ಹೇಳಿದೆ.
ಹುಲಿಮಂಗಲದ ಪೋಡು ಬಳಿಯ ಶೆಡ್ ನಲ್ಲಿ ಈಕೆ ವಾಸವಿದ್ದಳು. ಭಾರತ್ ಮಾತಾ ಕಿ ಜೈ ಘೋಷಣೆ ವೇಳೆ ಈಕೆ ಜೈ ಬಾಂಗ್ಲಾ ಎಂದು ಘೋಷಣೆ ಕೂಗಿದ್ದಳು. ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು. ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಹೆಬ್ಬಗೋಡಿ ಠಾಣೆ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದರು.
ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ ಮಾಡುವಾಗ ಸ್ಥಳೀಯ ವ್ಯಕ್ತಿಯೊಬ್ಬ ವಿಡಿಯೋ ಮಾಡುತ್ತಿದ್ದನು. ಈ ವೇಳೆ ಮಹಿಳೆಯೊಬ್ಬಳು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಬರುತ್ತಾರೆ. ಆ ವ್ಯಕ್ತಿ ಆಕೆಯನ್ನು ಮಾತನಾಡಿಸಿ ಭಾರತ್ ಮಾತಾ ಕೀ ಜೈ ಎನ್ನುತ್ತಾನೆ. ಆಗ ಸಿಟ್ಟಿಗೆದ್ದ ಮಹಿಳೆ ಬಾಂಗ್ಲಾಗೆ ಜೈ ಎನ್ನುತ್ತಾಳೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ವಿಡಿಯೋ ವೈರಲ್ ಆದ ಬೆನ್ನಲ್ಲೇ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದರು.

