ಬೆಂಗಳೂರು: ಮಾತೃತ್ವ, ಶಿಶುಪಾಲನ ರಜೆ ಹದಿನೈದು ದಿನಗಳಲ್ಲಿ ಮಂಜೂರಾತಿ ಮಾಡಲಾಗುವುದು. ಕೌನ್ಸೆಲಿಂಗ್ ವೇಳೆ ಶಿಕ್ಷಕರು ಇಚ್ಚಿಸುವ ಸ್ಥಳಕ್ಕೆ ವರ್ಗಾವಣೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಬಿಜೆಪಿಯ ವೈ.ಎಂ. ಸತೀಶ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಇನ್ನು ಮುಂದೆ ಮಹಿಳಾ ಶಿಕ್ಷಕರ ಮಾತೃತ್ವ ರಜೆಯೊಂದಿಗೆ ಶಿಶು ಪಾಲನ ರಜೆ ಸಂಯೋಜಿಸಿ ಉಪಯೋಗಿಸಿಕೊಳ್ಳಲು ಬಯಸಿದಲ್ಲಿ ಅಥವಾ ಶಿಶುಪಾಲನಾ ರಜೆಗೆ ಅರ್ಜಿ ಸಲ್ಲಿಸಿದಲ್ಲಿ ಸಕ್ಷಮ ಪ್ರಾಧಿಕಾರ 15 ದಿನದಲ್ಲಿ ರಜೆ ಮಂಜೂರು ಮಾಡಲು ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.
ಮಾತೃತ್ವ ರಜೆಯ ನಂತರ ಮರಳಿ ಕರ್ತವ್ಯಕ್ಕೆ ಹಾಜರಾಗುವ ಮಹಿಳಾ ಶಿಕ್ಷಕರಿಗೆ ಮಗುವಿನ ವಯಸ್ಸು ಐದು ವರ್ಷ ಪೂರ್ಣವಾಗುವವರೆಗೆ ಆರೈಕೆಗೆ ಅನುಕೂಲವಾಗುವ ರೀತಿಯಲ್ಲಿ ಇಚ್ಚಿಸುವ ಸ್ಥಳಕ್ಕೆ ವರ್ಗಾವಣೆ ಗೆ ಅವಕಾಶ ಕಲ್ಪಿಸಲಾಗುವುದು. ಮಾತೃತ್ವ ರಜೆ ಹಾಗೂ ಶಿಶುಪಾಲನಾ ರಜೆ ಮೇಲೆ ತೆರಳುವ ಮಹಿಳಾ ಶಿಕ್ಷಕರ ರಜೆ ಅವಧಿಗೆ ಅತಿಥಿ ಶಿಕ್ಷಕರನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

