ಬೆಂಗಳೂರು : ಫೋಟೋಶೂಟ್ ಮಾಡುವ ಕ್ರೇಜ್ಗೆ ಬೆಂಗಳೂರಲ್ಲಿ ಮತ್ತೊಂದು ಬಲಿಯಾಗಿದೆ. ಸ್ನೇಹಿತರೊಂದಿಗೆ ಸೇರಿ ಫೋಟೋ ತೆಗೆಸಿಕೊಳ್ಳಲು ಪಾಳುಬಿದ್ದ ರೆಸಾರ್ಟ್ಗೆ ತೆರಳಿದ್ದ 15 ವರ್ಷದ ಬಾಲಕನೊಬ್ಬ ಕಟ್ಟಡದ ಮೇಲಿನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಗರದ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಬಾಲಕನನ್ನು ನಿಶಾಂತ್ (15) ಎಂದು ಗುರುತಿಸಲಾಗಿದೆ. ಅನ್ನಪೂರ್ಣೇಶ್ವರಿನಗರದ ‘ರನ್ಯಾ ರೆಸಾರ್ಟ್’ (ಸುಮಾರು 15 ವರ್ಷಗಳಿಂದ ಮುಚ್ಚಲ್ಪಟ್ಟಿರುವ ಪಾಳುಬಿದ್ದ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ನಡೆದದ್ದು ಏನು? : ಮಾರ್ಚ್ 13ರ ಸಂಜೆ 5:30ರ ಸುಮಾರಿಗೆ ನಿಶಾಂತ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಫೋಟೋಶೂಟ್ಗಾಗಿ ಇಲ್ಲಿಗೆ ಬಂದಿದ್ದನು. ಇಬ್ಬರು ಸ್ನೇಹಿತರು ಕೆಳಭಾಗದಲ್ಲಿದ್ದರೆ, ನಿಶಾಂತ್ ಫೋಟೋಗಾಗಿ ಹಳೆಯ ಕಟ್ಟಡದ ಮೇಲ್ಭಾಗಕ್ಕೆ ಹತ್ತಿದ್ದಾನೆ. ಕಟ್ಟಡದ ಮೇಲೆ ಫೋಟೋಗೆ ಫೋಸ್ ನೀಡುವಾಗ ಅಥವಾ ಫೋಟೋ ತೆಗೆಯುವಾಗ ಅಜಾಗರೂಕತೆಯಿಂದ ಕಾಲು ಜಾರಿ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಪ್ರಸ್ತುತ ಅನ್ನಪೂರ್ಣೇಶ್ವರಿನಗರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

