ಶಿವಮೊಗ್ಗ: ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಗಳ ನಿಯಂತ್ರಣ ಜವಾಬ್ದಾರಿಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಗೆ ವರ್ಗಾಯಿಸುವ ಸರ್ಕಾರದ ಪ್ರಸ್ತಾವನೆ ವಿರೋಧಿಸಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು, ಪ್ರಾಂಶುಪಾಲರು ಹೋರಾಟ ಕೈಗೊಂಡಿದ್ದಾರೆ.
ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ. ಶಿವಮೊಗ್ಗದ ಸರ್ಕಾರಿ ಪಿಯು ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಸಭೆಯಲ್ಲಿ ಈ ಕುರಿತಾಗಿ ನಿರ್ಣಯ ಕೈಗೊಳ್ಳಲಾಗಿದೆ.
ಮೌಲ್ಯಮಾಪನ ಬಹಿಷ್ಕರಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ ತಿಳಿಸಿದ್ದಾರೆ.
ಮಾರ್ಚ್ 20 ರಿಂದ ರಾಜ್ಯದ ಎಂಟು ಕೇಂದ್ರಗಳಲ್ಲಿ ಆರಂಭವಾಗಲಿರುವ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸಲು ನಿರ್ಧರಿಸಲಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿದ್ದ ಪರೀಕ್ಷಾ ವಿಭಾಗವನ್ನು ಎಂದಿನಂತೆ ಅದೇ ಇಲಾಖೆಯ ನಿರ್ದೇಶನಾಲಯಕ್ಕೆ ನೀಡಬೇಕು. ಪದವಿ ಪೂರ್ವ ಕಾಲೇಜುಗಳಲ್ಲಿರುವ ವಿದ್ಯಾರ್ಥಿ ಉಪನ್ಯಾಸಕರ ಅನುಪಾತವನ್ನು ಎನ್.ಸಿ.ಇ.ಆರ್.ಟಿ. ಮಾರ್ಗಸೂಚಿ ಅನ್ವಯ ಮರುನಿಗದಿಪಡಿಸಬೇಕು. ಮೂರು ವರ್ಷಗಳಿಂದ ಪರಿಷ್ಕರಣೆಯಾಗದ ಮೌಲ್ಯಮಾಪನ ಬಗ್ಗೆ ಸಂಭಾವನೆ ಹೆಚ್ಚಳದ ಜೊತೆಗೆ ಬಾಕಿ ಪಾವತಿಸಬೇಕು. ಕಾರ್ಯಭಾರ ಕೊರತೆ ಇರುವ ಅನುದಾನಿತ ಪದವಿ ಪೂರ್ವ ಕಾಲೇಜುಗಳು ಉಪನ್ಯಾಸಕರನ್ನು ಸೇವೆಯಿಂದ ವಿಮುಕ್ತಗೊಳಿಸುವ ಆದೇಶ ಹಿಂಪಡೆದು ಅವರಿಗೆ ಸಮೀಪದ ಸರ್ಕಾರಿ ಕಾಲೇಜುಗಳಿಗೆ ನಿಯೋಜಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ರಾಜ್ಯ ಸರ್ಕಾರ ಪಿಯು ಶಿಕ್ಷಣ ಇಲಾಖೆ ನಿಯಂತ್ರಣವನ್ನು ಜಿಪಂ ಸಿಇಒ ಗೆ ವರ್ಗಾಯಿಸುವ ಬಗ್ಗೆ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಶಿಕ್ಷಣ ತಜ್ಞರು, ಉಪನ್ಯಾಸಕರ ಸಂಘಟನೆಗಳೊಂದಿಗೆ ಸರ್ಕಾರ ಚರ್ಚಿಸಿಲ್ಲ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಸ್ತಿತ್ವಕ್ಕೆ ಇದು ಮಾರಕವಾಗುತ್ತದೆ. ಅಧಿಕಾರ ವರ್ಗಾವಣೆ ಇಲಾಖೆಯ ಪಾಲಿಗೆ ಮರಣ ಶಾಸನವಾಗಲಿದ್ದು, ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಅನಿವಾರ್ಯವಾಗಿದೆ ಎಂದು ನಿಂಗೇಗೌಡ ತಿಳಿಸಿದ್ದಾರೆ.

