ದಾವಣಗೆರೆ: ಈ ವರ್ಷದ ಮೊದಲ ರಾಷ್ಟ್ರೀಯ ಲೋಕ್ ಅದಾಲತ್ ದಾವಣಗೆರೆಯಲ್ಲಿ ಯಶಸ್ವಿಯಾಗಿ ಜರುಗಿದೆ. ವೈಮನಸ್ಸು, ಸಣ್ಣಪುಟ್ಟ ಜಗಳಗಳಿಂದಾಗಿ ದೂರವಾಗಿದ್ದ ದಂಪತಿಗಳ ಬಾಳಲ್ಲಿ ಹೊಸ ಬೆಳಕು ಮೂಡಿದೆ. ನ್ಯಾಯಾಲಯದಲ್ಲಿ ಈ ನಿಟ್ಟಿನಲ್ಲಿ ಪ್ರಕರಣಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಲ್ಲಿ ಲೋಕ್ ಅದಾಲತ್ ಪ್ರಮುಖ ಪಾತ್ರ ವಹಿಸಿದೆ.
ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಜಿಲ್ಲೆಯಲ್ಲಿ ಒಟ್ಟು 6818 ಜಾರಿಯಲ್ಲಿರುವ ಪ್ರಕರಣಗಳು ಮತ್ತು 1,72,551 ವ್ಯಾಜ್ಯ ಪೂರ್ವ ಪ್ರಕರಣಗಳು ರಾಜೀ ಮೂಲಕ ಮುಕ್ತಾಯಗೊಂಡಿರುತ್ತವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಕೆ. ವೇಲಾ ಅವರು ತಿಳಿಸಿದರು.
ಅವರು ಶನಿವಾರ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ಲೋಕ್ ಅದಾಲತ್ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು.
ಎಲ್ಲಾ ನ್ಯಾಯಾಲಯಗಳಿಂದ ಇದೇ ಮಾರ್ಚ್ 1ರ ವೇಳೆಗೆ ಜಿಲ್ಲೆಯಲ್ಲಿ ಒಟ್ಟು 42,188 ಪ್ರಕರಣಗಳು ಬಾಕಿ ಇದ್ದವು. ಇದರಲ್ಲಿ ಲೋಕ್ ಅದಾಲತ್ ಗೆ ಒಟ್ಟು 11,841 ಪ್ರಕರಣಗಳನ್ನು ಗುರುತಿಸಲಾಗಿತ್ತು., ಮಧ್ಯಾಹ್ನದ ವೇಳೆಗೆ ಸುಮಾರು 6,818 ಪ್ರಕರಣಗಳು ಯಶಸ್ವಿಯಾಗಿ ಇತ್ಯರ್ಥಗೊಂಡಿವೆ. ಜಿಲ್ಲೆಯಲ್ಲಿ ಒಟ್ಟು 37 ವೈವಾಹಿಕ ಪ್ರಕರಣಗಳ ರಾಜಿಯಾಗಿ ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇಧನ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಿದ್ದ 28 ಜೋಡಿಗಳು ಒಂದಾಗಿ ಮತ್ತೊಮ್ಮೆ ಸಹಬಾಳ್ವೆ ನಡೆಸಲು ತೆರಳಿದ್ದಾರೆ. ಅದರಂತೆ ದಾವಣಗೆರೆಯ 4ನೇ ಅಪರ ಸಿವಿಲ್ ನ್ಯಾಯಾಲಯದಲ್ಲಿ 2 ಜೋಡಿಗಳು, ಚನ್ನಗಿರಿ ತಾಲ್ಲೂಕು ನ್ಯಾಯಾಲಯಗಳಲ್ಲಿ 5, ಹರಿಹರ ತಾಲ್ಲೂಕು ನ್ಯಾಯಾಲಯಗಳಲ್ಲಿ 1, ಹೊನ್ನಾಳಿ ತಾಲ್ಲೂಕು ನ್ಯಾಯಾಲಯಗಳಲ್ಲಿ 1. ಪ್ರಕರಣದಲ್ಲಿ ವಿವಾಹ ವಿಚ್ಛೇದನ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಿದ್ದ ಪ್ರಕರಣ ಹೀಗೆ ಜಿಲ್ಲೆಯಲ್ಲಿ ಒಟ್ಟಾರೆ 37 ಜೋಡಿಗಳು ಒಂದಾಗಿ ಮತ್ತೊಮ್ಮೆ ಸಹಬಾಳ್ವೆ ನಡೆಸಲು ತೆರಳಿದ್ದಾರೆ ಎಂದು ತಿಳಿಸಿದರು.
54 ಅಪರಾಧಿಕ ಪ್ರಕರಣಗಳು, 165 ಚೆಕ್ ಅಮಾನ್ಯ ಪ್ರಕರಣಗಳು, 50 ಬ್ಯಾಂಕ್ ವಸೂಲಾತಿ ಕೇಸ್ಗಳು, 27 ಇತರೆ ಹಣ ವಸೂಲಾತಿ, 55 ಅಪಘಾತ ಪರಿಹಾರ ಪ್ರಕರಣಗಳು, 123 ವಿದ್ಯುತ್ ಕಳ್ಳತನದ ಪ್ರಕರಣಗಳು, 38 ಪಾಲು ವಿಭಾಗಕ್ಕಾಗಿ ದಾಖಲಿಸಿದ ದಾವೆಗಳು, 15 ಮೊಟಾರು ವಾಹನ ಪರಿಹಾರ ಜಾರಿ ಅರ್ಜಿ, 106 ಇತರೆ ಜಾರಿ ಅರ್ಜಿಗಳು ಅಲ್ಲದೆ ಹಲವು ಕಾರಣಕ್ಕಾಗಿ ದಾಖಲಿಸಿದ 72 ದಾವೆಗಳು ಮತ್ತು ಜೀವನಾಂಶ ಕೋರಿ ದಾಖಲಿಸಿದ್ದ ದಾವೆಗಳು 39 ರಾಜೀ ಮೂಲಕ ಇತ್ಯರ್ಥಗೊಂಡಿರುತ್ತವೆ. ಜಿಲ್ಲೆಯಾದ್ಯಾಂತ ಜನನ ಪ್ರಮಾಣ ಪತ್ರ ಕೋರಿ ದಾಖಲಿಸಿದ್ದ 1138 ಪ್ರಕರಣಗಳು ಅದಾಲತ್ತಿನಲ್ಲಿ ಇತ್ಯರ್ಥಗೊಂಡಿವೆ. ಇದಲ್ಲದೇ ಇತರೆ ಪ್ರಕರಣಗಳು ಸೇರಿ ಒಟ್ಟು 6,818 ಜಾರಿಯಲ್ಲಿದ್ದ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ ಸುಮಾರು 1,138 ಕಿಂತ ಹೆಚ್ಚು ಶಾಲಾ ವಿದ್ಯಾರ್ಥಿಗಳ ಜನನ ಪ್ರಮಾಣ ಪತ್ರಗಳ ಕುರಿತು ಕಂದಾಯ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ರಾಜಿ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಮತ್ತು ಅವರುಗಳಿಗೆ ಸರ್ಕಾರದಿಂದ ಬರಬಹುದಾದ ವಿದ್ಯಾರ್ಥಿ ವೇತನ ಹಾಗೂ ಇತರೆ ಅನುಕೂಲತೆಗಳಿಗೆ ಅನುವು ಮಾಡಿಕೊಟ್ಟಂತಾಯಿತು. ಇದರಂತೆ ಇತರೆ ವ್ಯಾಜ್ಯ ಪೂರ್ವ ಪ್ರಕರಣಗಳಾದ ಬ್ಯಾಂಕ್ ಸಾಲ ವಾಸೂಲಾತಿ, ಕಾರ್ಮಿಕ ವ್ಯಾಜ್ಯಗಳು, ನೀರಿನ ಬಾಕಿ ವಸೂಲಾತಿ, ಕಂದಾಯ ಪ್ರಕರಣಗಳು, ಟ್ರಾಫಿಕ್ ಪ್ರಕರಣಗಳು ಇತ್ಯಾದಿ ಸೇರಿದಂತೆ ಒಟ್ಟಾರೆಯಾಗಿ 1,72,551 ಪ್ರಕರಣಗಳು ಇತ್ಯರ್ಥಗೊಂಡು ಮೇಲ್ಕಾಣಿಸಿದ ಎಲ್ಲಾ ಪ್ರಕರಣಗಳಿಂದಾಗಿ 13,19,83,769/-ವಸೂಲಾತಿಯಾಗಿರುತ್ತದೆ ಎಂದು ತಿಳಿಸಿದರು.
ಒಂದೇ ಕುಟುಂಬದ ಮಹದೇವಪ್ಪ-ಶಾಂತಿಲೀಲಾ ಮತ್ತು ರುದ್ರಪ್ಪ ಕಲ್ಪನಾ ದಂಪತಿಗಳು ಅಕ್ಕ,ತಂಗಿ ಮತ್ತು ಅಣ್ಣ, ತಮ್ಮ ದಂಪತಿಗಳು ಬೇರೆ ಬೇರೆಯಾಗಿದ್ದರು ಇಂದು ಒಂದಾಗಿದ್ದು ವಿಶೇಷವಾಗಿತ್ತು.
30 ವರ್ಷಗಳ ಕಾಲ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ತಿಪ್ಪೇಸ್ವಾಮಿ ಹಾಗೂ ಸುಮಾ ಎಂಬ ದಂಪತಿಗಳು ಇಂದು ಮತ್ತೆ ಒಂದಾಗುವ ಮೂಲಕ ಗಮನ ಸೆಳೆದರು. ಇವರ ಮಕ್ಕಳು ಉನ್ನತ ಮಟ್ಟದ ಶಿಕ್ಷಣ ಪಡೆದು ಮಗಳು ಡಾಕ್ಟರ್ ಮತ್ತು ಮಗ ಇಂಜಿನಿಯರ್ ವಿದೇಶದಲ್ಲಿ ನೆಲೆಸಿದ್ದಾರೆ. ಇಳಿವಯಸ್ಸಿನಲ್ಲಿ ಸಣ್ಣ ಕಾರಣಕ್ಕೆ ದೂರವಾಗಿದ್ದ ಈ ದಂಪತಿಗಳು, ನ್ಯಾಯಾಧೀಶರ ಮತ್ತು ವಕೀಲರ ಸಮ್ಮುಖದಲ್ಲಿ ರಾಜಿ ಮಾಡಿಕೊಂಡು ಸಂಭ್ರಮಿಸಿದರು.
2007ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ಮತ್ತೊಂದು ದಂಪತಿಗಳು ಕೂಡ ಇಂದು ಒಂದಾದರು. “ಕೆಲಸದ ಒತ್ತಡ ಮತ್ತು ಹಣದ ಬೆನ್ನತ್ತಿ ಹೋಗುವ ಧಾವಂತದಲ್ಲಿ ಕುಟುಂಬಕ್ಕೆ ಸಮಯ ಕೊಡಲು ಸಾಧ್ಯವಾಗಲಿಲ್ಲ. ಇದರಿಂದ ಮನಸ್ತಾಪ ಉಂಟಾಗಿತ್ತು. ಆದರೆ ಈಗ ನಮ್ಮ ತಪ್ಪು ನಮಗೆ ಅರ್ಥವಾಗಿದೆ, ಎಂದು ಬಸವರಾಜು ಮತ್ತು ರೇಖಾ ದಂಪತಿಗಳು ತಮ್ಮ ಭಾವನೆಗಳನ್ನು ಹಂಚಿಕೊಂಡರು.
ಆಸ್ತಿ ಹಂಚಿಕೆ ವಿಷಯದಲ್ಲಿ 16 ವರ್ಷಗಳಿಂದ ಬಗೆಹರಿಯದೆ ಇದ್ದ ಪ್ರಕರಣವನ್ನು ಇಂದು ಲೋಕ ಅದಾಲತ್ ನಲ್ಲಿ ಒಂದು ಮಾಡಿದರು. ನಾಗರಾಜು ಮತ್ತು ಗೀತಾಬಾಯಿ ದಂಪತಿಗಳು ನ್ಯಾಯಾಧೀಶರಿಗೆ, ವಕೀಲರಿಗೆ ಧನ್ಯವಾದಗಳನ್ನು ತಿಳಿಸಿದರು.
ರಾಜೀ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡ ಕಕ್ಷಿದಾರರಿಗೆ ಅಭಿನಂದನೆಗಳು. ಹೆಚ್ಚು ಪ್ರಕರಣಗಳು ರಾಜೀಯಾಗಲು ಮತ್ತು ಪಕ್ಷಗಾರರಿಗೆ ಮಾಹಿತಿ, ಕಾನೂನು ಸಲಹೆ ಮತ್ತು ಮಾಹಿತಿಯನ್ನು ನೀಡಿದ ಜಿಲ್ಲೆಯ ಎಲ್ಲಾ ನ್ಯಾಯಾಧೀಶರಿಗೂ, ಸಂಧಾನಕಾರರಿಗೂ, ವಕೀಲರಿಗೂ ನ್ಯಾಯಾಂಗ ಇಲಾಖೆ, ವಕೀಲರ ಸಂಘಗಳು, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನಗರಸಭೆ, ಬಿ.ಎಸ್.ಎನ್.ಎಲ್. ಸಾರಿಗೆ ಇಲಾಖೆ, ಹಾಗೂ ಇನ್ನಿತರೆ ಎಲ್ಲಾ ಇಲಾಖೆಯ ಅಧಿಕಾರಿಗಳಿಗೂ ಮತ್ತು ಸಿಬ್ಬಂದಿಯವರಿಗೆ ಧನ್ಯವಾದ ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ್ ಮ.ಕರೆಣ್ಣವರ, ಜಿಲ್ಲಾ ನ್ಯಾಯಾಧೀಶಕರು, ವಕೀಲರು ಉಪಸ್ಥಿತರಿದ್ದರು.

